ಗುಜರಾತಿನ ಸೂರತ್ ಡೈಮಂಡ್ ಬೋರ್ಸ್ ಈಗ ಭಾರಿ ಸುದ್ದಿಯಲ್ಲಿದೆ! ( Surat Diamond Bourse ) ಏಕೆಂದರೆ ಇದು ಈಗ ವಿಶ್ವದಲ್ಲೇ ಅತ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿ ಎನ್ನಿಸಿದೆ. ಕಳೆದ 82 ವರ್ಷಗಳಿಂದ, ಅಂದರೆ 1941ರಿಂದಲೂ ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗಾನ್ ಜಗತ್ತಿನ ಅತಿ ದೊಡ್ಡ ಆಫೀಸ್ ಎನ್ನಿಸಿತ್ತು. ಆದರೆ ಅದರ ದಾಖಲೆಯನ್ನು ಸೂರತ್ ಡೈಮಂಡ್ ಬೋರ್ಸ್ ಇದೀಗ ತನ್ನದಾಗಿಸಿದ್ದು, ಇತಿಹಾಸ ಸೃಷ್ಟಿಸಿದೆ. ಪೆಂಟಗಾನ್ ಅಂದ್ರೆ ಅಮೆರಿಕದ ಮಿಲಿಟರಿ ಶಕ್ತಿಯ ಪವರ್ ಸೆಂಟರ್. ಅದನ್ನು ಎರಡನೇ ಜಾಗತಿಕ ಯುದ್ಧದ ಸಂದರ್ಭ ನಿರ್ಮಿಸಲಾಗಿತ್ತು.
ಈಗ ಸ್ವಲ್ಪ ಇತಿಹಾಸ ನೋಡೋಣ. 1938ರಲ್ಲಿ ಸೂರತ್ ನಲ್ಲಿ ಸಣ್ಣ ಪ್ರಮಾಣದಲ್ಲಿ ವಜ್ರದ ಪಾಲಿಷ್ ಬಿಸಿನೆಸ್ ಶುರುವಾಯಿತು. 60ರ ದಶಕದಲ್ಲಿ ಇಲ್ಲಿನ ಪಟೇಲ್ ಸಮುದಾಯದ ವರ್ತಕರು ರಷ್ಯಾ ಮೂಲದಿಂದ ಕಚ್ಚಾ ವಜ್ರಗಳನ್ನು ಆಮದು ಮಾಡಿಕೊಂಡು, ಪಾಲಿಷ್ ಮಾಡಿ ಸಂಸ್ಕರಿಸಿ ಮಾರಾಟ ಮಾಡಲು ಆರಂಭಿಸಿದರು. ನೆನಪಿಡಿ, ಈಗ ಜಗತ್ತಿನಲ್ಲಿ ಮಾರಾಟವಾಗುವ 90% ಸಂಸ್ಕರಿತ ವಜ್ರಗಳು ಸೂರತ್‌ನಲ್ಲಿರುವ 6,000ಕ್ಕೂ ಹೆಚ್ಚು ಕಟ್ & ಪಾಲಿಷ್ ಘಟಕಗಳಲ್ಲಿ ಸಂಸ್ಕರಣೆಯಾಗುತ್ತವೆ. ಜಗತ್ತಿನಾದ್ಯಂತ ಮಾರಾಟವಾಗುವ ಪ್ರತಿ 11 ಡೈಮಂಡ್‌ಗಳಲ್ಲಿ 8 ಸೂರತ್‌ನಲ್ಲಿ ಪಾಲಿಷ್ ಆಗುತ್ತವೆ. ಕಚ್ಚಾ ವಜ್ರವನ್ನು ಸಂಸ್ಕರಿಸಿ ಹೊಳೆಯುವಂತೆ ಮಾಡಲು ಲಕ್ಷಾಂತರ ನುರಿತ ಕರ ಕುಶಲ ಕೆಲಸಗಾರರು, ತಂತ್ರಜ್ಞರು ಇಲ್ಲಿದ್ದಾರೆ. ಸೂರತ್ ಪ್ರತಿ ವರ್ಷ ವಜ್ರದ ಸಂಸ್ಕರಣೆಯ ಉದ್ದಿಮೆಯಿಂದ 1.6 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸುತ್ತದೆ. ಇಂಟರ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೈಮಂಡ್ ಗ್ರೇಡಿಂಗ್ ಆಂಡ್ ರಿಸರ್ಚ್ ಸಂಸ್ಥೆ ಇಲ್ಲಿದೆ. ಭವಿಷ್ಯದ ದಿನಗಳಲ್ಲಿ ಇಲ್ಲಿನ ಕೆಲಸಗಾರರು, ತಂತ್ರಜ್ಞರು, ಉತ್ಪಾದಕರು ಮತ್ತು ಖರೀದಿದಾರರಿಗೆ ಈ ಕೇಂದ್ರ ಅನುಕೂಲ ಮಾಡಿಕೊಡಲಿದೆ. ಏಕೆಂದರೆ ಸೂರತ್‌ನ ಬೀದಿ ಬದಿಯಲ್ಲೂ ಸಣ್ಣ ಪುಟ್ಟ ವ್ಯಾಪಾರಿಗಳು ವಜ್ರದ ವ್ಯಾಪಾರ ಮಾಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಸೂರತ್ ಡೈಮಂಡ್ ಬೋರ್ಸ್, 35 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ. ಇದು ನಾಟ್ ಫಾರ್ ಪ್ರಾಫಿಟ್ ಆರ್ಗನೈಸೇಶನ್ ಆಗಿದ್ದು, ಕಂಪನಿಗಳ ಕಾಯಿದೆ ಅಡಿಯಲ್ಲಿ ನೋಂದಣಿಯಾಗಿದೆ. ಇದು 66 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಹೊಂದಿದೆ. 9 ಟವರ್‌ಗಳನ್ನು, ಹೊಂದಿದ್ದು ಪ್ರತಿಯೊಂದರಲ್ಲೂ 15 ಅಂತಸ್ತುಗಳು ಇವೆ. ಒಟ್ಟು 4200 ಕಚೇರಿ ಕಟ್ಟಡಗಳು ಇಲ್ಲಿವೆ. 131 ಎಲಿವೇಟರ್‌ಗಳಿವೆ. ಪ್ರತಿ ಕಚೇರಿ ಕಟ್ಟಡಕ್ಕೂ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಚೇರಿಗಳು 300 ಚದರ ಅಡಿಯಿಂದ 75,000 ಚದರ ಅಡಿ ತನಕ ಸ್ಥಳಾವಕಾಶಗಳನ್ನು ಒಳಗೊಂಡಿದೆ. 67 ಸಾವಿರ ವೃತ್ತಿಪರರು ಇಲ್ಲಿ ಕೆಲಸ ಮಾಡಬಹುದು. ಒಟ್ಟು 1.5 ಲಕ್ಷ ಮಂದಿಗೆ ಈ ಕಚೇರಿಗಳು ನೇರವಾಗಿ ಉದ್ಯೋಗ ನೀಡುವ ನಿರೀಕ್ಷೆ ಇದೆ. ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್, ಜ್ಯುವೆಲ್ಲರಿ ಮಾಲ್‌ಗಳು, ಇಂಟರ್ ನ್ಯಾಶನಲ್ ಬ್ಯಾಂಕಿಂಗ್ ಈ ಕಚೇರಿಯ ಭಾಗಗಳಾಗಿ ಇರಲಿವೆ.
ಸಂಸ್ಕರಿತ ವಜ್ರಗಳನ್ನು ಖರೀದಿಸಲು 175ಕ್ಕೂ ಹೆಚ್ಚು ದೇಶಗಳಿಂದ ವ್ಯಾಪಾರಿಗಳು ಸೂರತ್‌ಗೆ ಬಂದು ಹೋಗುತ್ತಾರೆ. ಅವರಿಗೆ ಸುಸಜ್ಜಿತ ವ್ಯವಸ್ಥೆ ಸಿಗಲಿದೆ. ಇದು ವ್ಯಾಪಾರ-ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಲಿದೆ.
ಹೊಸ ಹೊಳಪು ನೀಡಲಿದೆಯೆ?: ಹೀಗಿದ್ದರೂ, ಸೂರತ್‌ನ ವಜ್ರದ ಉದ್ದಿಮೆ ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ಸವಾಲುಗಳನ್ನು ಎದುರಿಸುತ್ತಿದೆ. ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ರಫ್ತು ಕಡಿಮೆಯಾಗಿದೆ. ಅಮೆರಿಕದಲ್ಲಿ ರಿಸೆಶನ್‌ನ ಛಾಯೆ ಇರೋದ್ರಿಂದ ಅಲ್ಲಿನ ಜನರು ಡೈಮಂಡ್ ಖರೀದಿಗೆ ಆಸಕ್ತಿ ವಹಿಸುತ್ತಿಲ್ಲ. ಹಾಗಾದರೆ ಇದಕ್ಕೆ ಕಾರಣವೇನು? ರಷ್ಯಾ -ಉಕ್ರೇನ್ ವಾರ್, ಜಾಗತಿಕ ಆರ್ಥಿಕ ಬಿಕ್ಕಟ್ಟು, ಲ್ಯಾಬ್‌ಗಳಲ್ಲಿಯೇ ತಯಾರಿಸುವ ಸಿಂಥೆಟಿಕ್ ವಜ್ರ ಅಥವಾ ಕೃತಕ ವಜ್ರಗಳು ಕೂಡ ವಜ್ರದ ಇಂಡಸ್ಟ್ರಿಯ ಮೇಲೆ ಪ್ರಭಾವ ಬೀರಿದೆ.
ಇದನ್ನೂ ಓದಿ:ಸೂರತ್ ವಜ್ರ ಸಂಕೀರ್ಣ ಇಂದು ಉದ್ಘಾಟನೆ; ಅದ್ಭುತ ಫೋಟೊಗಳನ್ನು ಹಂಚಿಕೊಂಡ ಮೋದಿ
ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾವನ್ನು ಒಳಗೊಂಡಿರುವ ಜಿ7 ದೇಶಗಳ ಒಕ್ಕೂಟವು ರಷ್ಯಾದಿಂದ ನೇರವಾಗಿ ವಜ್ರಗಳ ಆಮದನ್ನು ನಿಷೇಧಿಸಿವೆ. ಎರಡನೆಯದಾಗಿ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಸಂಸ್ಕರಣೆಯಾಗುವ, ರಷ್ಯಾ ಮೂಲದ ವಜ್ರಗಳನ್ನೂ ಜಿ7 ದೇಶಗಳು ಬ್ಯಾನ್ ಮಾಡಿವೆ. ಇದು ಸೂರತ್‌ನ ವಜ್ರದ ಇಂಡಸ್ಟ್ರಿಯಲ್ಲಿರುವ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ರಷ್ಯಾ ವಜ್ರದ ಆಮದು 50% ಕುಸಿದಿದೆ. ಹೀಗಾಗಿ ಲಕ್ಷಾಂತರ ಮಂದಿಗೆ ಜೀವನೋಪಾಯ ನೀಡಿರುವ ಸೂರತ್‌ನ ಡೈಮಂಡ್ ಉದ್ದಿಮೆಯ ಹಿತಾಸಕ್ತಿಯನ್ನು ಕಾಪಾಡುವುದೂ ಅಷ್ಟೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದಾಖಲೆಯ ಹೊಸ ವಾಣಿಜ್ಯ ಸಂಕೀರ್ಣ ವಜ್ರದ ಇಂಡಸ್ಟ್ರಿಗೆ ಹೊಸ ಹೊಳಪನ್ನು ನೀಡಲಿದೆ ಎಂಬ ಹೊಸ ನಿರೀಕ್ಷೆ ಈಗ ಉಂಟಾಗಿದೆ.