ಹೈದರಾಬಾದ್: ಹೈದರಾಬಾದ್ ಬಳಿ 4,000 ಸ್ಟಾರ್ಟಪ್‌ಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ “ಟಿ-ಹಬ್ ೨.೦ʼ (T-Hub ೨.೦) ಕೇಂದ್ರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಉದ್ಘಾಟಿಸಿದ್ದಾರೆ.
ಹೈದರಬಾದ್ ಸಮೀಪದ ರಾಯ್‌ದುರ್ಗ್‌ನಲ್ಲಿ ಒಟ್ಟು ೪೦೦ ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಇದು ಮೊದಲ ಹಂತದ ಟಿ-ಹಬ್‌ಗೆ ಹೋಲಿಸಿದರೆ ಐದು ಪಟ್ಟು ದೊಡ್ಡದು.
ಟಿ-ಹಬ್ ೨.೦ ಕೇಂದ್ರ ೧೦ ಅಂತಸ್ತುಗಳನ್ನು ಒಳಗೊಂಡಿದೆ. ಸ್ಟಾರ್ಟಪ್‌ಗಳನ್ನು ಸ್ಥಾಪಿಸಲು ಬಯಸುವವರಿಗೆ, ಈಗಾಗಲೇ ನಡೆಸುತ್ತಿರುವವರಿಗೆ, ವೆಂಚರ್ ಕ್ಯಾಪಿಟಲಿಸ್ಟ್‌ಗಳಿಗೆ ಅನುಕೂಲ ಕಲ್ಪಿಸಲಿದೆ.
ಐಐಟಿ-ಹೈದರಾಬಾದ್ ಕ್ಯಾಂಪಸ್‌ನಲ್ಲಿ ೭೦,೦೦೦ ಚದರ ಅಡಿ ಕಟ್ಟಡದಲ್ಲಿ ಟಿ-ಹಬ್ ಅನ್ನು ೨೦೧೫ರಲ್ಲಿ ಆರಂಭಿಸಲಾಗಿತ್ತು. ರಾಯ್‌ದುರ್ಗ್‌ನಲ್ಲಿರುವ ಹೊಸ ಟಿ-ಹಬ್, ೩.೭೦ ಲಕ್ಷ ಚದರ ಅಡಿ ಜಾಗವನ್ನು ಹೊಂದಿದೆ. ಈ ಸಂದರ್ಭ ೨೦ ಯುನಿಕಾರ್ನ್ ಮತ್ತು ೧೪ ಸೂನಿಕಾರ್ನ್ ಸ್ಟಾರ್ಟಪ್‌ಗಳ ಸಂಸ್ಥಾಪಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ , ” ವಿಶ್ವದರ್ಜೆಯ ಟಿ-ಹಬ್ ಅನ್ನು ನಾವು ತೆರೆದಿದ್ದೇವೆ. ತೆಲಂಗಾಣವು ಸ್ಟಾರ್ಟಪ್‌ಗಳಿಗೆ ದೇಶದಲ್ಲಿಯೇ ಜನಪ್ರಿಯ ತಾಣವಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಜಗತ್ತಿನಲ್ಲೇ ಅಫರ್ಡಬಲ್ ಟ್ಯಾಲೆಂಟ್‌ಗಳ ವಿಚಾರದಲ್ಲಿ, ಟಾಪ್ ೧೦ ಸ್ಟಾರ್ಟಪ್ ಎಕೊಸಿಸ್ಟಮ್‌ಗಳಲ್ಲಿ ತೆಲಂಗಾಣ ಕೂಡ ಒಂದಾಗಿದೆ. ಟಿ-ಹಬ್ ದೇಶದಲ್ಲೇ ಉತ್ತಮ ಮಾದರಿಯಾಗಿದೆ. ೨,೦೦೦ ಉದ್ಯಮಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಟಿ-ಹಬ್ ಸ್ಟಾರ್ಟಪ್‌ಗಳು ೧೧೯ ಕೋಟಿ ಡಾಲರ್ (೯.೨೮ ಲಕ್ಷ ಕೋಟಿ ರೂ.) ಬಂಡವಾಳವನ್ನು ಸ್ವೀಕರಿಸಿವೆʼʼ ಎಂದು ತಿಳಿಸಿದರು.