Site icon Vistara News

TATA GROUP ಅಧ್ಯಕ್ಷರ ಡ್ಯೂಪ್ಲೆಕ್ಸ್ ಮನೆಯ ಬೆಲೆ ₹98 ಕೋಟಿ

ಮುಂಬಯಿ: ಟಾಟಾ ಸಮೂಹದ (TATA GROUP) ಅಧ್ಯಕ್ಷ ಎನ್.ಚಂದ್ರಶೇಖರನ್ ಮತ್ತು ಅವರ ಕುಟುಂಬ ಮುಂಬಯಿನಲ್ಲಿ ಬಹು ಅಂತಸ್ತಿನ ಐಷಾರಾಮಿ ಡ್ಯೂಪ್ಲೆಕ್ಸ್ ಮನೆಯನ್ನು ಖರೀದಿಸಿದೆ. ವರದಿಗಳ ಪ್ರಕಾರ ಇದರ ಬೆಲೆ ₹98 ಕೋಟಿ.

ಮುಂಬಯಿನ ಪೆಡ್ಡೆರ್ ರಸ್ತೆಯಲ್ಲಿನ 28 ಅಂತಸ್ತಿನ ಐಷಾರಾಮಿ ಅಪಾರ್ಟ್ಮೆಂಟ್‌ನಲ್ಲಿ ತಮ್ಮ ಮನೆಯನ್ನು ಖರೀದಿಸಿದ್ದಾರೆ.
ಈ ಆಸ್ತಿಯನ್ನು 58ವರ್ಷದ ಚಂದ್ರಶೇಖರನ್, ಅವರ ಪತ್ನಿ ಲಲಿತಾ ಮತ್ತು ಮಗನ ಹೆಸರಿಗೆ ನೋಂದಣಿ ಮಾಡಲಾಗಿದೆ.
ಬಿಲ್ಡರ್ ಸಮೀರ್ ಭೋಜ್ವಾನಿ ಅವರ ಜಿವೇಶ್ ಡೆವಲರ‍್ಸ್ ಈ ಪ್ರಾಪರ್ಟಿಯನ್ನು ಮಾರಾಟ ಮಾಡಿದೆ. ಪ್ರತಿ ಚದರ ಅಡಿಗೆ 1.6ಲಕ್ಷ ಚದರ ಅಡಿಗಳಂತೆ ಮಾರಾಟವಾಗಿದೆ.

ಮಾಸಿಕ ₹20 ಲಕ್ಷ ಬಾಡಿಗೆ
ಮುಂಬಯಿನ ಜಸ್ಲೋಕ್ ಆಸ್ಪತ್ರೆಗೆ ಸಮೀಪದಲ್ಲಿರುವ ಈ ಮನೆಯನ್ನು ಕಳೆದ 5 ವರ್ಷಗಳಿಂದ ಚಂದ್ರಶೇಖರನ್ ಮಾಸಿಕ ₹20 ಲಕ್ಷ ಬಾಡಿಗೆಗೆ ಪಡೆದಿದ್ದರು. ಇದೀಗ ಅದನ್ನೇ ತಮ್ಮದಾಗಿಸಿದ್ದಾರೆ. ಅಪಾರ್ಟ್ಮೆಂಟ್‌ನ 11 ಮತ್ತು 12 ನೇ ಅಂತಸ್ತಿನಲ್ಲಿ ಚಂದ್ರಶೇಖರನ್ ಅವರ ಡ್ಯೂಪ್ಲೆಕ್ಸ್ ಮನೆ ಇದೆ. ಕಾರ್ಪೆಟ್ ಏರಿಯಾ 6,000 ಚದರ ಅಡಿ ಇದೆ. ರಿಯಲ್ ಎಸ್ಟೇಟ್ ಮೂಲಗಳ ಪ್ರಕಾರ ಇಂಥ ಅಧಿಕ ಮೌಲ್ಯದ ವರ್ಗಾವಣೆಗಳು ಅಪರೂಪ.
2017 ರ ಫೆಬ್ರವರಿಯಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾದ ಬಳಿಕ ಈ ಮನೆಗೆ ಬಂದಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಟಾಟಾ ಸನ್ಸ್ ಆಡಳಿತ ಮಂಡಳಿಯು ಅವರ ಅವಧಿಯನ್ನು ಅವಿರೋಧವಾಗಿ ಮತ್ತೆ 5 ವರ್ಷಗಳಿಗೆ ವಿಸ್ತರಿಸಿತ್ತು.

ಇದನ್ನೂ ಓದಿ | ಮಾರುಕಟ್ಟೆಗೆ ಬರಲಿದೆ ಟಾಟಾ ‘ಅವಿನ್ಯ’ EV

ಚಂದ್ರಶೇಖರನ್ ವೇತನ ₹91 ಕೋಟಿ
ಭಾರತದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಕಾರ್ಪೊರೇಟ್ ಬಾಸ್‌ಗಳಲ್ಲಿ ಚಂದ್ರಶೇಖರನ್ ಅತಿ ಹೆಚ್ಚು ಗಳಿಸುತ್ತಿದ್ದಾರೆ. 2021ರಲ್ಲಿ ₹91 ಕೋಟಿ ವೇತನ ಗಳಿಸಿದ್ದರು.
ಚಂದ್ರಶೇಖರನ್ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ ಸಿಇಒ ಆಗಿದ್ದರು. ಟಾಟಾ ಮೋಟರ‍್ಸ್ ಮತ್ತು ಟಾಟಾ ಗ್ಲೋಬಲ್ ಬ್ರೇವರೇಜಸ್‌ನ ಅಧ್ಯಕ್ಷರಾಗಿದ್ದರು. ಟಾಟಾ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಪಾರ್ಸಿಯೇತರ ಹಾಗೂ ವೃತ್ತಿಪರ ಎಕ್ಸಿಕ್ಯುಟಿವ್ ಅವರಾಗಿದ್ದಾರೆ. ಸೈರಸ್ ಮಿಸ್ತ್ರಿ ಅವರನ್ನು ಪದಚ್ಯುತಿಗೊಳಿಸಿದ ಬಳಿಕ ಟಾಟಾ ಗ್ರೂಪ್‌ನ ನೂತನ ಅಧ್ಯಕ್ಷರಾಗಿ ಚಂದ್ರಶೇಖರನ್ ಅವರನ್ನು ನೇಮಕಗೊಳಿಸಲಾಗಿತ್ತು.

ಚಂದ್ರಶೇಖರನ್ ಅವರು ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಮೊಹನೂರ್‌ನಲ್ಲಿ ಜನಿಸಿದರು. ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದವರು. ಬಳಿಕಿ ಕೊಯಮತ್ತೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಗಳಿಸಿದರು. ತಿರುಚ್ಚಿರಪಳ್ಳಿಯ ಎನ್‌ಐಟಿಯಲ್ಲಿ ಎಂಸಿಎ ಪೂರೈಸಿದರು. 1982ರಲ್ಲಿ ಟಿಸಿಎಸ್‌ಗೆ ಸೇರಿದ್ದರು. 2009ರಲ್ಲಿ ಕಂಪನಿಯ ಸಿಇಒ ಆದರು. ಇದಕ್ಕೂ ಮುನ್ನ ಟಿಸಿಎಸ್‌ನ ಸಿಒಒ ಮತ್ತು ಕಾರ್ಯಕಾರಿ ನಿರ್ದೇಶಕರಾಗಿದ್ದರು. ಚಂದ್ರಶೇಖರನ್ ಅವರ ಸಾರಥ್ಯದಲ್ಲಿ ಟಿಸಿಎಸ್ ತನ್ನ ಆದಾಯ ಮತ್ತು ಲಾಭವನ್ನು ಗಣನೀಯ ಹೆಚ್ಚಿಸಿತ್ತು. 2005-16ರಲ್ಲಿ ಕಂಪನಿಯ ಆದಾಯ 16.5 ಶತಕೋಟಿ ಡಾಲರ್ (₹1.23 ಲಕ್ಷ ಕೋಟಿ) ಆಗಿತ್ತು. 2015ರಲ್ಲಿ ಟಿಸಿಎಸ್ ಐಟಿ ಸೇವೆಯಲ್ಲಿ ವಿಶ್ವದ ಪ್ರಬಲ ಬ್ರ್ಯಾಂಡ್‌ ಆಗಿತ್ತು. ಆರ್‌ಬಿಐ ಅವರನ್ನು 2016ರಲ್ಲಿ ತನ್ನ ಮಂಡಳಿಯಲ್ಲಿ ನಿರ್ದೇಶಕರನ್ನಾಗಿ 2016ರಲ್ಲಿ ನೇಮಿಸಿದೆ.
2022ರ ಮಾರ್ಚ್‌ ನಲ್ಲಿ ಅವರಿಗೆ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ನಾಸ್ಕಾಮ್‌ನ ಅಧ್ಯಕ್ಷರಾಗಿಯೂ 2012-13ರಲ್ಲಿ ಸೇವೆ ಸಲ್ಲಿಸಿದ್ದಾರೆ.

ಮ್ಯಾರಾಥಾನ್ ಪಟು
ಚಂದ್ರಶೇಖರನ್ ಅವರು ಸಂಗೀತ, ಛಾಯಾಗ್ರಹಣ, ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅಮ್‌ಸ್ಟರ್‌ಡ್ಯಾಮ್, ಬೋಸ್ಟನ್, ಶಿಕಾಗೊ, ಬರ್ಲಿನ್, ಮುಂಬಯಿ, ನ್ಯೂಯಾರ್ಕ್ ಮತ್ತು ಟೋಕಿಯೊದಲ್ಲಿ ನಡೆದ ಮ್ಯಾರಾಥಾನ್‌ಗಳಲ್ಲಿ ಭಾಗವಹಿಸಿದ್ದಾರೆ.

https://vistaranews.com/2022/04/27/tata-proposes-to-buy-air-asia/
Exit mobile version