ನವ ದೆಹಲಿ: ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿಯ ೪೭ನೇ ಸಭೆಯಲ್ಲಿ ದಿನ ಬಳಕೆಯ ನಾನಾ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ಹಿಂದೆ ಜಿಎಸ್‌ಟಿ ಮುಕ್ತವಾಗಿದ್ದ ಉತ್ಪನ್ನಗಳೂ ಜಿಎಸ್‌ಟಿ ವ್ಯಾಪ್ತಿಗೆ ಬಂದಿವೆ. ಹೀಗಾಗಿ ಜುಲೈ ೧೮ರಿಂದ ಹಲವು ಉತ್ಪನ್ನಗಳು ದುಬಾರಿಯಾಗಲಿದೆ. ಹಣದುಬ್ಬರದಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ. ಹಾಗಾದರೆ ಜಿಎಸ್‌ಟಿ ದರ ಪರಿಷ್ಕರಣೆಯಿಂದ ಯಾವುದು ದುಬಾರಿಯಾಗಲಿದೆ ಹಾಗೂ ಯಾವುದು ಅಗ್ಗವಾಗಲಿದೆ ಎಂಬುದನ್ನು ನೋಡೋಣ.
ಜುಲೈ ೧೮ರಿಂದ ಯಾವುದು ದುಬಾರಿ?
ಪ್ಯಾಕೇಜ್ಡ್ ಮೊಸರು, ಮಜ್ಜಿಗೆ, ಲಸ್ಸಿ, ಜೇನುತುಪ್ಪ
ಪ್ರಿ-ಪ್ಯೇಕೇಜ್ಡ್ ಮತ್ತು ಪ್ರಿ-ಲೇಬಲ್ಡ್ ಉತ್ಪನ್ನಗಳು ದುಬಾರಿಯಾಗಲಿವೆ. ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಜೋಳದ ಹಿಟ್ಟು, ಬೆಲ್ಲ, ಮಂಡಕ್ಕಿಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ. ಹಾಗೂ ಇವುಗಳಿಗೆ 5% ಜಿಎಸ್‌ಟಿ ಅನ್ವಯವಾಗುವುದು ಇದಕ್ಕೆ ಕಾರಣ. ಈ ಹಿಂದೆ ಈ ಎಲ್ಲ ಉತ್ಪನ್ನಗಳಿಗೆ ಜಿಎಸ್‌ಟಿ ಇರಲಿಲ್ಲ. ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್‌ಗಳಿಂದ ಸಾಮಾನ್ಯ ಸ್ಟೋರ್‌ಗಳಲ್ಲಿಯೂ ಇಂಥ ಪ್ಯಾಕೇಜ್ಡ್ ಆಹಾರ ವಸ್ತುಗಳ ಮಾರಾಟ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಭಾರವಾಗಲಿದೆ.
ಪ್ಯಾಕೇಜ್ಡ್ ಹಿಟ್ಟು, ಅಕ್ಕಿ
ಬ್ರ್ಯಾಂಡ್ ಅಲ್ಲದಿದ್ದರೂ ಪ್ರಿ-ಪ್ಯಾಕೇಜ್ಡ್ ಮತ್ತು ಲೇಬಲ್ಡ್ ಆಗಿರುವ ಅಕ್ಕಿ, ಹಿಟ್ಟುಗಳ ಮೇಲೆ ೫% ಜಿಎಸ್‌ಟಿ ಅನ್ವಯವಾಗಲಿದ್ದು, ಅವುಗಳ ದರ ಏರಿಕೆಯಾಗಲಿದೆ. ಪ್ರಸ್ತುತ ಬ್ರ್ಯಾಂಡೆಡ್ ಉತ್ಪನ್ನಗಳಿಗೆ ಮಾತ್ರ ೫% ಜಿಎಸ್‌ಟಿ ಇದೆ.
ಚೆಕ್ ಪುಸ್ತಕ
ಬ್ಯಾಂಕ್‌ಗಳು ನೀಡುವ ಚೆಕ್ ಪುಸ್ತಕಗಳ ಮೇಲೆ ೧೮% ಜಿಎಸ್‌ಟಿ ಅನ್ವಯವಾಗಲಿದೆ. ಹೀಗಾಗಿ ಚೆಕ್ ಬುಕ್ ವೆಚ್ಚ ಏರಿಕೆಯಾಗಲಿದೆ.
ಆಸ್ಪತ್ರೆಯಲ್ಲಿ ಕೊಠಡಿ ಬಾಡಿಗೆ
ಆಸ್ಪತ್ರೆಗಳಲ್ಲಿ ದಿನಕ್ಕೆ ೫,೦೦೦ ರೂ.ಗೂ ಹೆಚ್ಚಿನ ಕೊಠಡಿ ಬಾಡಿಗೆಗೆ ( ಐಸಿಯು ಹೊರತುಪಡಿಸಿ) ೫% ಜಿಎಸ್‌ಟಿ ಅನ್ವಯಿಸಲಿದೆ.
ಹೋಟೆಲ್ ರೂಮ್ ಬಾಡಿಗೆ
ಹೋಟೆಲ್‌ಗಳಲ್ಲಿ ದಿನಕ್ಕೆ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ರೂಮ್‌ಗಳಲ್ಲಿ ವಾಸ್ತವ್ಯಕ್ಕೆ ೧೨% ಜಿಎಸ್‌ಟಿ ಅನ್ವಯವಾಗಲಿದೆ. ಈ ಹಿಂದೆ ತೆರಿಗೆ ವಿನಾಯಿತಿ ಇತ್ತು. ಹೀಗಾಗಿ ಹೋಟೆಲ್ ಬಾಡಿಗೆ ದರ ಹೆಚ್ಚಳವಾಗಲಿದೆ.
ಇ-ತ್ಯಾಜ್ಯಗಳಿಗೆ ಜಿಎಸ್‌ಟಿ ಈಗಿನ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
ಅಂಚೆ ಸೇವೆ
ಪೋಸ್ಟ್ ಕಾರ್ಡ್, ೧೦ ಗ್ರಾಮ್‌ಗಿಂತ ಕೆಳಗಿನ ಎನ್ವಲಪ್ ಹೊರತುಪಡಿಸಿ ಉಳಿದ ಅಂಚೆ ಇಲಾಖೆ ಸೇವೆಗೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಲಾಗಿದ್ದು, ಅವುಗಳು ತುಟ್ಟಿಯಾಗಲಿದೆ.
ಸಕ್ಕರೆ, ನೇಚ್ಯುರಲ್ ಫೈಬರ್ ದಾಸ್ತಾನು, ವೇರ್‌ಹೌಸ್ (ಗೋದಾಮು) ಸೇವೆಗೆ ತೆರಿಗೆ ವಿನಾಯಿತಿ ರದ್ದಾಗಲಿದೆ.
ಎಲ್‌ಇಡಿ ಬಲ್ಬ್
ಎಲ್‌ಇಡಿ ಬಲ್ಬ್, ಮುದ್ರಣಕ್ಕೆ ಬಳಸುವ ಶಾಯಿ, ಚೂರಿ, ಬ್ಲೇಡ್, ವಿದ್ಯುತ್ ಚಾಲಿತ ಪಂಪ್, ಡೇರಿ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿಯನ್ನು ೧೨%ರಿಂದ ೧೮%ಕ್ಕೆ ಏರಿಸಲಾಗುವುದು.
ಧಾನ್ಯಗಳ ಮಿಲ್‌ಗಳಲ್ಲಿ ಬಳಸುವ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
ಸೋಲಾರ್ ವಾಟರ್ ಹೀಟರ್, ಸಂಸ್ಕರಿತ ಲೆದರ್ ಮೇಲೆ ಜಿಎಸ್‌ಟಿ ೧೨%ಕ್ಕೆ ಏರಿಕೆಯಾಗಲಿದೆ.
ಪೆಟ್ರೋಲಿಯಂ ಮೂಲದ ನಿರ್ದಿಷ್ಟ ಉತ್ಪನ್ನಗಳ ಮೇಲೆ ಜಿಎಸ್‌ಟಿ ೫%ಯಿಂದ ೧೮%ಕ್ಕೆ ವೃದ್ಧಿಸಲಿದೆ.
ಈಶಾನ್ಯ ರಾಜ್ಯಗಳಿಗೆ ಬಿಸಿನೆಸ್ ಕ್ಲಾಸ್ ವಿಮಾನಯಾನಕ್ಕೆ ತೆರಿಗೆ ವಿನಾಯಿತಿ ರದ್ದಾಗಲಿದೆ.
ಕಸಾಯಿಖಾನೆ ಸೇವೆಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ.
ಯಾವುದು ಅಗ್ಗ?
ರೋಪ್‌ವೇ ಪ್ರಯಾಣ, ಲಾಜಿಸ್ಟಿಕ್ಸ್
ರೋಪ್‌ವೇ ಪ್ರಯಾಣ ದರ ಕಡಿಮೆಯಾಗಲಿದೆ. ರೋಪ್‌ವೇಯ ಪ್ರಯಾಣ ದರ ಮತ್ತು ಸರಕು ಸಾಗಣೆ ದರದ ಜಿಎಸ್‌ಟಿಯನ್ನು ಶೇ.೧೮ರಿಂದ ಶೇ.೫ಕ್ಕೆ ಇಳಿಸಲಾಗಿದೆ.
ರಸ್ತೆ ಮೂಲಕ ಸರಕು ಸಾಗಣೆ ದರವೂ ಕಡಿಮೆಯಾಗಲಿದೆ. ಇದಕ್ಕೆ ವಿಧಿಸಲಾಗುತ್ತಿದ್ದ ಜಿಎಸ್‌ಟಿಯನ್ನು ಶೇ. ೧೮ರಿಂದ ಶೇ.೧೨ ಕ್ಕೆ ಇಳಿಸಲಾಗಿದೆ.
ಆರ್ಥೋಪೆಡಿಕ್ ಉಪಕರಣ
ಆರ್ಥೋಪೆಡಿಕ್ ಉಪಕರಣಗಳ ದರ ಇಳಿಕೆಯಾಗಲಿದೆ. ಸ್ಪ್ಲಿಂಟ್‌ಗಳು ಮತ್ತು ಮೂಳೆ ಮುರಿದಾಗ ಬಳಸುವ ಸಲಕರಣೆಗಳು, ದೇಹದ ಕೃತಕ ಭಾಗಗಳು, ದೇಹಕ್ಕೆ ಅಳವಡಿಸಿದ ಸಲಕರೆಣೆಗಳು ಮತ್ತು ದೇಹಕ್ಕೆ ಸಂಬಂಧಿಸಿದಂತೆ ಹೊರಗೆ ಬಳಸುವ ಸಲಕರಣೆಗಳ ಜಿಎಸ್‌ಟಿಯನ್ನು ಶೇ. ೧೨ ರಿಂದ ಶೇ.೫ಕ್ಕೆ ಇಳಿಸಲಾಗಿದೆ.
ರಕ್ಷಣಾ ಪಡೆಗಳು ಬಳಸುವ ಸಲಕರಣೆಗಳ ಜಿಎಸ್‌ಟಿಯನ್ನು ಇಳಿಸಲಾಗಿದ್ದು, ಇವುಗಳ ದರ ಕಡಿಮೆಯಾಗಲಿದೆ.