ಮುಂಬಯಿ: ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TaTa Consultancy Services) ಚಾಟ್‌ಜಿಪಿಟಿ ಮಾದರಿಯಲ್ಲಿ (ChatGPT) ತನ್ನದೇ ಆದ ಕೃತಕಬುದ್ದಿಮತ್ತೆಯ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಚಾಟ್‌ಜಿಪಿಟಿಯನ್ನು ಓಪನ್ ಎಐ (OpenAI) ತಯಾರಿಸಿದೆ. ಎಂಟರ್‌ಪ್ರೈಸ್ ಕೋಡ್ ಸೃಷ್ಟಿಗೆ (enterprise code ) ಟಿಸಿಎಸ್ ಸೃಷ್ಟಿಸುವ ಎಐ ಸಾಫ್ಟ್‌ವೇರ್ ಬಳಕೆಯಾಗಲಿದೆ (artificial intelligence) ಎಂದು ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ ಎನ್.ಗಣಪತಿ ಸುಬ್ರಮಣಿಯನ್ ತಿಳಿಸಿದ್ದಾರೆ.
ಟಿಸಿಎಸ್‌ನ ಪ್ರಾಜೆಕ್ಟ್ ಆರಂಭಿಕ ಹಂತದಲ್ಲಿದ್ದು, ಆಂತರಿಕ ಕೋಡ್, ಡೇಟಾ ಮತ್ತು ರಿಸೋರ್ಸ್ ವಿಭಾಗ ಈ ಬಗ್ಗೆ ಸಕ್ರಿಯವಾಗಿದೆ. ಟಿಸಿಎಸ್ ಕಳೆದ ಹಲವಾರು ವರ್ಷಗಳಿಂದಲೂ ಕೋಡ್, ಡೇಟಾ ಅನುಭವವನ್ನು ಹೊಂದಿದೆ. ಈ ಎಲ್ಲ ಜ್ಞಾನವನ್ನು ಬಳಸಿಕೊಳ್ಳಲಾಗುವುದು. ಭವಿಷ್ಯದಲ್ಲಿ ಕಂಪನಿಯು ತನ್ನ ಗ್ರಾಹಕರ ಪ್ರಾಜೆಕ್ಟ್‌ಗಳನ್ನು ವಹಿಸುವ ಸಂದರ್ಭದಲ್ಲಿ ತನ್ನದೇ ಎಐ ಸಲ್ಯೂಷನ್ಸ್ ಅನ್ನು ಬಳಸುವುದು ಉತ್ತಮ. ಇದಕ್ಕಾಗಿ ಹಲವಾರು ಇತರ ಪೂರೈಕೆದಾರರ ಅವಲಂಬನೆ ಒಳ್ಳೆಯದಲ್ಲ ಎಂದು ಸಿಒಒ ಎನ್ ಗಣಪತಿ ಹೇಳಿದ್ದಾರೆ.
ಟಿಸಿಎಸ್ ಸಿಒಒ ಸುಬ್ರಮಣಿಯನ್ ಅವರು ಮುಂದಿನ ವರ್ಷ ಮೇನಲ್ಲಿ ನಿವೃತ್ತರಾಗಲಿದ್ದಾರೆ. ಇದಕ್ಕೂ ಮುನ್ನ ಚಾಟ್ ಜಿಪಿಟಿ ಮಾದರಿಯ ಎಐ ಸಾಫ್ಟ್‌ವೇರ್ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಕೃತಕ ಬುದ್ದಿಮತ್ತೆ ವಲಯದ ಎಂಜಿನಿಯರ್‌ಗಳಿಗೆ (Prompt engineer) ಭಾರಿ ಬೇಡಿಕೆ ಇದೆ. ಉದ್ದಿಮೆಯ ಅಗತ್ಯಗಳಿಗೆ ತಕ್ಕಂತೆ ಎಐ ಆಧರಿತ ಲಾರ್ಜ್ ಲಾಂಗ್ವೇಜ್ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುವ ಎಂಜಿನಿಯರ್‌ಗಳಿಗೆ ಉತ್ತಮ ಕರಿಯರ್ ಅವಕಾಶಗಳು ಇವೆ ಎಂದು ಟಿಸಿಎಸ್ ಸಿಒಒ ಸುಬ್ರಮಣಿಯನ್ ವಿವರಿಸಿದ್ದಾರೆ.
ಟಿಸಿಎಸ್ ಈಗಾಗಲೇ ಲೋ ಕೋಡ್ ಸಾಫ್ಟ್‌ವೇರ್ ಮಾಸ್ಟರ್‌ಕ್ರಾಫ್ಟ್ (MasterCraft) ಅನ್ನು ಹೊಂದಿದೆ. ಇದು ಮೈಕ್ರೊಸಾಫ್ಟ್‌ನ ಕೋಪೈಲೊಟ್ (Copilot) ಮಾದರಿಯಲ್ಲಿದೆ. ಈಗಾಗಲೇ 100ಕ್ಕೂ ಹೆಚ್ಚು ಟಿಸಿಎಸ್ ಗ್ರಾಹಕರು ಮಾಸ್ಟರ್‌ಕ್ರಾಫ್ಟ್ ಟೂಲ್ ಅನ್ನು ಬಳಸುತ್ತಿದ್ದಾರೆ ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ.