ನವ ದೆಹಲಿ: ಭಾರತದ ನಿವ್ವಳ ತೆರಿಗೆ ಸಂಗ್ರಹ 2023-24ರ ಸಾಲಿನಲ್ಲಿ ಇದುವರೆಗೆ 4.75 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 16% ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ತಿಳಿಸಿದೆ. (Direct tax collection)
2023ರ ಏಪ್ರಿಲ್ 1-ಜುಲೈ 9 ಅವಧಿಯಲ್ಲಿ 42,000 ಕೋಟಿ ರೂ.ಗಳ ರಿಫಂಡ್ ಅನ್ನು ಮಾಡಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 2.55% ಹೆಚ್ಚು. ಒಟ್ಟಾರೆ ನೇರ ತೆರಿಗೆ ಸಂಗ್ರಹ 14.65% ಏರಿದ್ದು, 5.17 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ.
2023-24ರ ಬಜೆಟ್ ಪ್ರಕಾರ 2023-24ರಲ್ಲಿ 18.23 ಲಕ್ಷ ಕೋಟಿ ರೂ.ಗೂ ಹೆಚ್ಚು ನೇರ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. 2022-23ರ 16.61 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ 9.75% ಏರಿಕೆಯಾಗುವ ಸಾಧ್ಯತೆ ಇದೆ. ಯಾವುದು ನೇರ ತೆರಿಗೆ? ಆದಾಯ ತೆರಿಗೆ, ಕಾರ್ಪೊರೇಷನ್ ತೆರಿಗೆ, ಪ್ರಾಪರ್ಟಿ ತೆರಿಗೆ, ಇನ್‌ಹೆರಿಟೆನ್ಸ್ ಟ್ಯಾಕ್ಸ್ ನೇರ ತೆರಿಗೆಗೆ ಉದಾಹರಣೆಗಳಾಗಿದೆ. ನೇರ ತೆರಿಗೆ ಎಂದರೆ ಹೆಸರೇ ಸೂಚಿಸುವಂತೆ ನೇರವಾಗಿ ತೆರಿಗೆದಾರರಿಗೆ ವಿಧಿಸುವ ತೆರಿಗೆ. ಇದನ್ನು ತೆರಿಗೆದಾರರು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಲಯಕ್ಕೆ ಮರಳುವ ಜತೆಗೆ ಸರಕು ಮತ್ತು ಸೇವಾ ತೆರಿಗೆ (GST Collection) ಸಂಗ್ರಹ ಪ್ರಮಾಣವೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಜೂನ್‌ನಲ್ಲಿ ದೇಶಾದ್ಯಂತ 1,61,497 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಜಿಎಸ್‌ಟಿ ಸಂಗ್ರಹ ಶೇ.12ರಷ್ಟು ಏರಿಕೆಯಾಗಿದೆ. ಹಾಗೆಯೇ, ಒಟ್ಟು ಜಿಎಸ್‌ಟಿಯಲ್ಲಿ ಕರ್ನಾಟಕದ ಪಾಲು ಕೂಡ ಕಳೆದ ತಿಂಗಳಿಗಿಂತ ಹೆಚ್ಚಾಗಿದೆ.
ಇದನ್ನೂ ಓದಿ: Karnataka Bank : ನೇರ ತೆರಿಗೆ, ಪರೋಕ್ಷ ತೆರಿಗೆ ಸಂಗ್ರಹಿಸಲು ಕರ್ಣಾಟಕ ಬ್ಯಾಂಕ್‌ಗೆ ಆರ್‌ಬಿಐ ಅನುಮತಿ
ಕರ್ನಾಟಕದಲ್ಲಿ 2023ರ ಮೇನಲ್ಲಿ 10,317 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದರೆ, ಏಪ್ರಿಲ್‌ನಲ್ಲಿ 9,232 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ, ಜೂನ್‌ನಲ್ಲಿ ಕಳೆದ ಎರಡು ತಿಂಗಳಿಗಿಂತ ಕರ್ನಾಟಕದ ಜಿಎಸ್‌ಟಿ ಪಾಲು ಜಾಸ್ತಿಯಾಗಿದೆ. ಅಂದರೆ, ಜೂನ್‌ನಲ್ಲಿ ಕರ್ನಾಟಕದಿಂದ 11,193 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಿಂದ ಕೇಂದ್ರದಿಂದ ಕರ್ನಾಟಕಕ್ಕೆ ಹೆಚ್ಚಿನ ಪಾಲು ಜಿಎಸ್‌ಟಿ ಸಿಗಲಿದೆ.