ನವ ದೆಹಲಿ: ದೇಶದ ನಾನಾ ಕಡೆಗಳಲ್ಲಿ ಟೊಮ್ಯಾಟೊ ದರ ಇತ್ತೀಚಿನ ವಾರಗಳಲ್ಲಿ ದಾಖಲೆಯ ಮಟ್ಟಕ್ಕೇರಿದೆ. (Tomato market) ಪ್ರತಿ ಕೆ.ಜಿಗೆ 100-120 ರೂ. ನಡುವೆ ದರ ಹೊಯ್ದಾಡುತ್ತಿದೆ. ಕೆಲವು ರೈತರು ನಷ್ಟ ಮಾಡಿದ್ದರೆ ಕೆಲವು ರೈತರು ಭರ್ಜರಿ ಲಾಭವನ್ನೂ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಟೊಮ್ಯಾಟೊ ಬೆಳೆದ ರೈತರೊಬ್ಬರು ಬರೋಬ್ಬರಿ 3 ಕೋಟಿ ರೂ. ಆದಾಯ ಗಳಿಸಿದ್ದಾರೆ. ಈ ಅದ್ಭುತ ಯಶೋಗಾಥೆ ಇಲ್ಲಿದೆ.
ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ಪಿ.ಚಂದ್ರಮೌಳಿ, ಅವರ ಸೋದರ ಮುರಳಿ, ತಾಯಿ ರಾಜಮ್ಮ ತಮ್ಮ ಒಟ್ಟು 32 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದರು. ಇದೀಗ ಚಂದ್ರಮೌಳಿ ಅವರ ಯಶಸ್ಸು ಸುದ್ದಿಯಾಗಿದೆ. ಎರಡು ಗ್ರಾಮಗಳಲ್ಲಿ ಅವರ ಕೃಷಿ ಭೂಮಿ ಇತ್ತು.
ಈ ಹಿಂದೆ ಚಂದ್ರ ಮೌಳಿ ಅವರೂ ಹಲವು ಸಲ ಅನಿಶ್ಚಿತತೆಯನ್ನು ಎದುರಿಸಿದ್ದರು. ನಿರಾಶಾದಾಯಕ ಫಲಿತಾಂಶ ಅವರಿಗೆ ಎದುರಾಗಿತ್ತು. ಆದರೆ ನಿರಂತರವಾಗಿ ನವೀನ ರೀತಿಯ ಕೃಷಿ ಪದ್ಧತಿ ಮತ್ತು ಮಾರುಕಟ್ಟೆ ಕಾರ್ಯತಂತ್ರಗಳ ಮೂಲಕ ಬೆಳವಣಿಗೆ ಸಾಧಿಸಿದ್ದರು.
ಕಳೆದ ಏಪ್ರಿಲ್‌ನಲ್ಲಿ ಚಂದ್ರ ಮೌಳಿ ಮತ್ತವರ ಕುಟುಂಬವು ಟೊಮ್ಯಾಟೊ ಬೆಳೆಯಲು ನಿರ್ಧರಿಸಿತ್ತು. ಬೇಸಗೆಯ ಬಳಿಕ ಉತ್ತಮ ಫಸಲನ್ನು ನಿರೀಕ್ಷಿಸಿತ್ತು. ಅವರು ಸಾಹು ವೆರೈಟಿಯ ಟೊಮ್ಯಾಟೊ ಗಿಡಗಳನ್ನು 22 ಎಕರೆಗಳಲ್ಲಿ ನೆಟ್ಟರು. ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿದರು. ಕರ್ನಾಟಕದ ಕೋಲಾರ ಮಾರುಕಟ್ಟೆ ಅವರಿಗೆ ಸಮೀಪದಲ್ಲಿತ್ತು. ಅಲ್ಲಿ ಬೇಡಿಕೆಯೂ ಚೆನ್ನಾಗಿತ್ತು. ಪ್ರತಿ 15 ಕೆಜಿ ಟೊಮ್ಯಾಟೊ ಬಾಕ್ಸ್ ತಲಾ 1000-1500 ರೂ. ದರದಲ್ಲಿ ಮಾರಾಟವಾಯಿತು. ಸುಮಾರು 40,000 ಬಾಕ್ಸ್ ಟೊಮ್ಯಾಟೊ ಇದುವರೆಗೆ ಮಾರಾಟವಾಗಿದೆ. ಚಂದ್ರಮೌಳಿ ಕುಟುಂಬ ತಿಂಗಳಿಗೆ 3 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ.
ಇದನ್ನೂ ಓದಿ: Costly Mango: ಟೊಮ್ಯಾಟೊಗೊಂದು ಕಾಲ, ಮಾವಿಗೊಂದು ಕಾಲ; ಈ ರೈತ ಬೆಳೆಯುವ ಕೆ.ಜಿ ಮಾವಿಗೆ ಇಷ್ಟು ಲಕ್ಷ ರೂ.!
ಚಂದ್ರಮೌಳಿ ಕುಟುಂಬ 22 ಎಕರೆಯಲ್ಲಿ ಟೊಮ್ಯಾಟೊ ಬೆಳೆಯುವ ಸಲುವಾಗಿ 70 ಲಕ್ಷ ರೂ. ವೆಚ್ಚ ಮಾಡಿತ್ತು. ಎಕರೆಗೆ 3 ಲಕ್ಷ ರೂ. ಖರ್ಚಾಗಿತ್ತು. ಮಾರುಕಟ್ಟೆ ಕಮಿಶನ್ 20 ಲಕ್ಷ ರೂ. ಆಗಿತ್ತು. ಸಾಗಣೆ ವೆಚ್ಚ ಸುಮಾರು 10 ಲಕ್ಷ ರೂ. ಆಗಿತ್ತು. 3 ಕೋಟಿ ರೂ. ನಿವ್ವಳ ಆದಾಯವನ್ನು ಕುಟುಂಬ ಗಳಿಸಿದೆ. ಇದೇ ರೀತಿ ತೆಲಂಗಾಣದ ಬಿ. ಮಹಿಪಾಲ್ ರೆಡ್ಡಿ ಎಂಬುವರು ಟೊಮ್ಯಾಟೊ ಮಾರಿ ಕಳೆದ 15 ದಿನಗಳಲ್ಲಿ 2 ಕೋಟಿ ರೂ. ಆದಾಯ ಗಳಿಸಿದ್ದಾರೆ.