ನವ ದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಕಚೇರಿ ಕಟ್ಟಡ ಎಂಬ ಹೆಗ್ಗಳಿಕೆಗೆ (World’s largest office building) ಇದುವರೆಗೆ ಅಮೆರಿಕದ ಪೆಂಟಗನ್ ಪಾತ್ರವಾಗಿತ್ತು. ಇದೀಗ ಭಾರತದ ಗುಜರಾತ್‌ನಲ್ಲಿರುವ ಸೂರತ್ ಡೈಮಂಡ್ ಬೋರ್ಸ್ (Surat Diamond Bourse) ಪೆಂಟಗನ್ ಅನ್ನೂ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.
15 ಅಂತಸ್ತುಗಳಿರುವ ಸೂರತ್ ಡೈಮಂಡ್ ಬೋರ್ಸ್ (SDB) 35 ಎಕರೆ ಪ್ರದೇಶದಲ್ಲಿ ಹರಡಿದೆ. ಇದನ್ನು ನಿರ್ಮಿಸಲು ನಾಲ್ಕು ವರ್ಷ ಬೇಕಾಯಿತು. ಸೂರತ್ ಡೈಮಂಡ್ ಬೋರ್ಸ್ ಸೂರತ್‌ನ ವಜ್ರದ ಇಂಡಸ್ಟ್ರಿಯ ಡೈನಾಮಿಸಂ ಮತ್ತು ಬೆಳವಣಿಗೆಯ ದ್ಯೋತಕವಾಗಿದೆ. ಭಾರತದ ಉದ್ಯಮಶೀಲತೆಯ ಬಿಂಬವಾಗಿದೆ. ಈ ಕಚೇರಿ ಕಟ್ಟಡ ಮತ್ತಷ್ಟು ಉದ್ಯಮಶೀಲತೆ, ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ವಿಶ್ವದ ಅತಿ ದೊಡ್ಡ ಕಚೇರಿ ಕಟ್ಟಡ ಎಸ್‌ಡಿಬಿಯಲ್ಲಿ ವಜ್ರದ ಉದ್ದಿಮೆಯ ಎಲ್ಲ ಖರೀದಿದಾರರು, ಉತ್ಪಾದಕರು, ಮಾರಾಟಗಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ಈ ಕಚೇರಿ ಸಂಕೀರ್ಣ ಸಹಕಾರಿಯಾಗಲಿದೆ. 20 ಲಕ್ಷ ಚದರ ಅಡಿಯ ವಾಹನ ಪಾರ್ಕಿಂಗ್ ಸೌಲಭ್ಯವನ್ನು ಇದು ಹೊಂದಿದೆ.
Surat Diamond Bourse showcases the dynamism and growth of Surat's diamond industry. It is also a testament to India’s entrepreneurial spirit. It will serve as a hub for trade, innovation and collaboration, further boosting our economy and creating employment opportunities. https://t.co/rBkvYdBhXv
— Narendra Modi (@narendramodi) July 19, 2023
ಸೂರತ್ ಡೈಮಂಡ್ ಬೋರ್ಸ್ ವಜ್ರದ ವ್ಯಾಪಾರ ಚಟುವಟಿಕೆಗೆ ವೇದಿಕೆಯಾಗಲಿದೆ. 71 ಲಕ್ಷ ಚದರ ಅಡಿಯಷ್ಟು ಸ್ಥಳಾವಕಾಶವನ್ನು ಎಸ್‌ಡಿಬಿ ಹೊಂದಿದೆ. 2015ರಲ್ಲಿ ಎಸ್‌ಡಿಬಿ ಪ್ರಾಜೆಕ್ಟ್ ಅನ್ನು ಆರಂಭಿಸಲಾಗಿತ್ತು. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಕಾಮಗಾರಿ ವಿಳಂಬವಾಗಿತ್ತು. ವಲ್ಲಭಭಾಯಿ ಲಖಾನಿ ಎಸ್‌ಡಿಬಿಯ ಅಧ್ಯಕ್ಷರಾಗಿದ್ದಾರೆ.
ಎಸ್‌ಡಿಬಿಯಲ್ಲಿ 15 ಅಂತಸ್ತುಗಳ 9 ಗೋಪುರಗಳು ಇವೆ. 4,700 ಆಫೀಸ್ ಸ್ಫೇಸ್‌ಗಳು ಇವೆ. 131 ಲಿಫ್ಟ್‌ಗಳು ಇವೆ. ಪ್ರತಿ ಸೆಕೆಂಡ್‌ಗೆ ಮೂರ್ ಮೀಟರ್ ಇದರ ವೇಗವಾಗಿದೆ. ಕಾನ್ಫರೆನ್ಸ್ ಹಾಲ್, ಮಲ್ಟಿ ಪರ್ಪಸ್ ಹಾಲ್, ರೆಸ್ಟೊರೆಂಟ್, ಬ್ಯಾಂಕ್, ಡೈಮಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಇಂಟರ್‌ನ್ಯಾಶನಲ್ ಕ್ವೆನ್ಷನ್ ಸೆಂಟರ್, ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಫೈವ್ ಸ್ಟಾರ್ ಹೋಟೆಲ್‌ಗಳನ್ನು ಇದು ಒಳಗೊಂಡಿದೆ.
ವಿಶ್ವದ 90% ವಜ್ರಗಳು ಸೂರತ್‌ನಲ್ಲಿ ಸಂಸ್ಕರಣೆಯಾಗುತ್ತವೆ. 65,000ಕ್ಕೂ ಹೆಚ್ಚು ವಜ್ರದ ವೃತ್ತಿಪರರು ಇಲ್ಲಿ ಇದ್ದಾರೆ. ಕಟ್ಟರ್‌ಗಳು, ಪಾಲಿಷ್ ಮಾಡುವವರು, ಟ್ರೇಡರ್ಸ್ ಇಲ್ಲಿದ್ದಾರೆ.