Site icon Vistara News

Write off bad loans : ಬ್ಯಾಂಕ್‌ಗಳಿಂದ 2022-23ರಲ್ಲಿ 2.09 ಲಕ್ಷ ಕೋಟಿ ರೂ. ಸಾಲ ರೈಟ್‌ ಆಫ್

cash

ನವ ದೆಹಲಿ: ಬ್ಯಾಂಕ್‌ಗಳು 2023ರ ಮಾರ್ಚ್‌ ಅಂತ್ಯಕ್ಕೆ 2.09 ಲಕ್ಷ ಕೋಟಿ ರೂ. ಮೌಲ್ಯದ ಅನುತ್ಪಾದಕ ಸಾಲ ಅಥವಾ ಬ್ಯಾಡ್‌ ಲೋನ್‌ ಅನ್ನು ರೈಟ್‌ ಆಫ್‌ ಮಾಡಿವೆ. (Write off bad loans) ಕಳೆದ 5 ವರ್ಷಗಳಲ್ಲಿ ಬ್ಯಾಂಕ್‌ಗಳು ಒಟ್ಟು 10.57 ಲಕ್ಷ ಕೋಟಿ ರೂ.ಗಳನ್ನು ರೈಟ್‌ ಆಫ್‌ ಮಾಡಿವೆ ಎಂದು ಆರ್‌ಬಿಐ, ಆರ್‌ಟಿಐ ಅಡಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದೆ. 2022ರಲ್ಲಿ 174,966 ಕೋಟಿ ರೂ. ಸಾಲ ರೈಟ್‌ ಆಫ್‌ ಮಾಡಲಾಗಿತ್ತು.

ಈ ರೀತಿ ಭಾರಿ ಪ್ರಮಾಣದಲ್ಲಿ ರೈಟ್‌ ಆಫ್‌ ಮಾಡಿರುವುದರ ಪರಿಣಾಮ ಬ್ಯಾಂಕ್‌ಗಳ ಒಟ್ಟಾರೆ ಅನುತ್ಪಾದಕ ಆಸ್ತಿ ಅಥವಾ ಜಿಎನ್‌ಪಿಎ (Gross NPA) ಪ್ರಮಾಣ ಗಣನೀಯ ಇಳಿದಿದೆ. (Non – performing assets) ಒಟ್ಟಾರೆ ಎನ್‌ಪಿಎ 2018-2023ರ ಮಾರ್ಚ್‌ ತನಕದ ಅವಧಿಯಲ್ಲಿ 10.21 ಲಕ್ಷ ಕೋಟಿ ರೂ.ಗಳಿಂದ 5.55 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್‌ಬಿಐ ಡೇಟಾ ಪ್ರಕಾರ 2012-13ರಿಂದೀಚೆಗೆ ಬ್ಯಾಂಕ್‌ಗಳು 15,31,453 ಕೋಟಿ ರೂ. ಮೌಲ್ಯದ ಸಾಲವನ್ನು ರೈಟ್‌ ಆಫ್‌ ಮಾಡಿವೆ.

ಏನಿದು ರೈಟ್‌ ಆಫ್?‌ ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್‌ ಶೀಟ್‌ ಅನ್ನು ಸ್ವಚ್ಛಗೊಳಿಸುವ ಸಲುವಾಗಿ ರೈಟ್‌ ಆಫ್‌ ನೀತಿಯನ್ನು ಬಳಸುತ್ತವೆ. ರೈಟ್‌ ಆಫ್‌ನಲ್ಲಿ ವಸೂಲಾಗದ ಸಾಲವನ್ನು ಬ್ಯಾಲೆನ್ಸ್‌ಶೀಟ್‌ನಿಂದ ಪ್ರತ್ಯೇಕಿಸಲಾಗುತ್ತದೆ. ಆ ಮೊತ್ತದಷ್ಟು ಹಣವನ್ನು ಪ್ರತ್ಯೇಕವಾಗಿ ತೆಗೆದಿಡಲಾಗುತ್ತದೆ. ರೈಟ್‌ ಆಫ್‌ ಎಂದರೆ ಸಾಲ ಮನ್ನಾ ಅಲ್ಲ. ಸಾಲ ರಿಕವರಿ ಆದಾಗ ಲಾಭದ ಲೆಕ್ಕಕ್ಕೆ ಸೇರುತ್ತದೆ. ರೈಟ್‌ ಆಫ್‌ ಮಾಡುವುದರಿಂದ ಬ್ಯಾಂಕಿಗೆ ತೆರಿಗೆ ಉಳಿಸಲು ಹಾಗೂ ಬ್ಯಾಲೆನ್ಸ್‌ ಶೀಟ್‌ ಸ್ವಚ್ಛಗೊಳಿಸಲು ಸಹಾಯಕವಾಗುತ್ತದೆ.

ಇದನ್ನೂ ಓದಿ: IBPS Clerk Recruitment 2023 : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 4,045 ಕ್ಲರ್ಕ್‌ ಹುದ್ದೆ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಯಾವುದೇ ಸಾಲವನ್ನು ಮರು ಪಾವತಿಸುವ ಸಂದರ್ಭ 90 ದಿನಗಳಿಗೂ ಹೆಚ್ಚು ಸಮಯ ತೆಗೆದುಕೊಂಡರೆ ಅಂಥ ಸಾಲವನ್ನು ಎನ್‌ಪಿಎ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್‌ಗಳು ಈ ಎನ್‌ಪಿಎಯನ್ನು ರೈಟ್‌ ಆಫ್‌ ಮಾಡಲು ಅವಕಾಶ ಇದೆ. ಹಾಗೂ ಹಲವು ವರ್ಷಗಳಿಂದ ಇದನ್ನು ಬ್ಯಾಂಕ್‌ಗಳು ಅನುಸರಿಸಿವೆ. ರೈಟ್‌ ಆಫ್‌ ಖಾತೆಗೆ ಸೇರಿದ ಸಾಲದ ಮರು ವಸೂಲಾತಿ ಮುಂದುವರಿಯುತ್ತದೆ. ಹೀಗಾಗಿ ಅದು ಸಾಲ ಮನ್ನಾ ಅಲ್ಲ.

ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 2022-23ರಲ್ಲಿ 24,061 ಕೋಟಿ ರೂ. ಮೊತ್ತದ ರೈಟ್‌ ಆಫ್‌ ಮಾಡಿದೆ. ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ 16,578 ಕೋಟಿ ರೂ, ಯೂನಿಯನ್‌ ಬ್ಯಾಂಕ್‌ 19,175 ಕೋಟಿ ರೂ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ 10,258 ಕೋಟಿ ರೂ, ಬ್ಯಾಂಕ್‌ ಆಫ್‌ ಬರೋಡಾ 17,998 ಕೋಟಿ ರೂ. ರೈಟ್‌ ಆಫ್‌ ಮಾಡಿವೆ.

Exit mobile version