ನವ ದೆಹಲಿ: ಆನ್‌ಲೈನ್ ಬ್ರೋಕರೇಜ್ ವಲಯದ ಜೆರೋಧಾ (Zerodha) ಕಂಪನಿಯ ಸಂಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರು ಫೋರ್ಬ್ಸ್ ಬಿಲಿಯನೇರ್ಸ್ 2023 ಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿದ್ದಾರೆ. ನಿತಿನ್ ಕಾಮತ್ ಅವರು 1104 ಹಾಗೂ ನಿಖಿಲ್ ಕಾಮತ್ 2405ನೇ ರ‍್ಯಾಂಕ್ ಗಳಿಸಿದ್ದಾರೆ.
ಫೋರ್ಬ್ಸ್ ಪಟ್ಟಿಯ ಪ್ರಕಾರ ನಿತಿನ್ ಕಾಮತ್ ಅವರ ಸಂಪತ್ತು 2.7 ಶತಕೋಟಿ ಡಾಲರ್ (22,140 ಕೋಟಿ ರೂ.) ಹಾಗೂ ನಿಖಿಲ್ ಕಾಮತ್ ಅವರ ಸಂಪತ್ತು 1.1 ಶತಕೋಟಿ ಡಾಲರ್ (9,020 ಕೋಟಿ ರೂ.) 2010ರಲ್ಲಿ ನಿತಿನ್ ಕಾಮತ್ ಅವರು ತಮ್ಮ ಸೋದರ ನಿಖಿಲ್ ಕಾಮತ್ ಅವರೊಡನೆ ಜೆರೋಧಾ ಬ್ರೋಕರೇಜ್ ಅನ್ನು ಸ್ಥಾಪಿಸಿದ್ದರು. ಕಡಿಮೆ ವೆಚ್ಚದಲ್ಲಿ ಷೇರು ಬ್ರೋಕರೇಜ್ ಒದಗಿಸುವ ನಿಟ್ಟಿನಲ್ಲಿ ಜೆರೋಧಾ ಜನಪ್ರಿಯತೆ ಗಳಿಸಿದೆ.
ಬಿಲ್ ಗೇಟ್ಸ್ ಶ್ಲಾಘನೆ
ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರು ಹವಾಮಾನ ಬದಲಾವಣೆಯ ವಿಚಾರದಲ್ಲಿ ನೀಡುತ್ತಿರುವ ಬೆಂಬಲ ಅಪಾರವಾಗಿದೆ ಎಂದು ಮೈಕ್ರೊಸಾಫ್ಟ್ ಸ್ಥಾಪಕ ಬಿಲ್‌ಗೇಟ್ಸ್ ಇತ್ತೀಚೆಗೆ ಶ್ಲಾಘಿಸಿದ್ದಾರೆ.
ಇತ್ತೀಚಿನ ಭಾರತ ಪ್ರವಾಸದ ವೇಳೆ ಬಿಲ್ ಗೇಟ್ಸ್ ಅವರು ಕಾಮತ್ ಸೋದರರನ್ನು ಭೇಟಿಯಾಗಿದ್ದರು. ಬ್ರೇಕ್ ಫಾಸ್ಟ್ ಮಾತುಕತೆ ನಡೆಸಿದ್ದರು. ಬಳಿಕ ಇದೀಗ ಟ್ವೀಟ್ ಮಾಡಿರುವ ಅವರು, ಭಾರತದಲ್ಲಿ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಹೆಸರಾಗಿರುವ ಯುವ ಉದ್ಯಮಿಗಳಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರಿಂದ ನಾನು ಪ್ರಭಾವಿತನಾಗಿರುವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲೀನ ಹೂಡಿಕೆ ಉತ್ತಮ:
ಷೇರು ಪೇಟೆಯಲ್ಲಿ ಹೂಡಿಕೆ ಮಾಡುವವರು ಒಂದು ಅಥವಾ ಎರಡು ವರ್ಷಗಳ ಸೀಮಿತ ಚೌಕಟ್ಟಿನಲ್ಲಿ ನೋಡಬಾರದು. ಅಲ್ಪಾವಧಿಯ ಹೂಡಿಕೆ ಲಾಭದಾಯಕವಲ್ಲ ಎನ್ನುವುದು ಕಾಮತರ ಮೊದಲನೆಯ ಸೂತ್ರ. 20-30 ವರ್ಷಗಳ ದೀರ್ಘಕಾಲೀನ ಹೂಡಿಕೆ ಪ್ಲಾನ್ ಉತ್ತಮ. ಇದರಿಂದ ಆದಾಯ ಗಳಿಸಬಹುದು ಎಂಬುದು ನಿಖಿಲ್ ಕಾಮತ್ ಅವರ ನೀತಿ.
ಎರಡನೆಯದಾಗಿ, ಹೂಡಿಕೆಯ 100% ಹಣವನ್ನೂ ಈಕ್ವಿಟಿ ಒಂದರಲ್ಲಿಯೇ ಹೂಡಿಕೆ ಮಾಡುವುದೂ ಸಮಂಜಸವಾಗದು. ಹೂಡಿಕೆ ವೈವಿಧ್ಯವಾಗಿರಲಿ. ಒಂದೇ ಷೇರಿನಲ್ಲಿ ಹೆಚ್ಚು ಹೂಡಿಕೆಯೂ ಸಲ್ಲದು. ಷೇರು-ಮ್ಯೂಚುವಲ್ ಫಂಡ್-ಚಿನ್ನ ಎಂದು ವೈವಿಧ್ಯಮಯ ಹೂಡಿಕೆ ಇರಲಿ ಎನ್ನುತ್ತಾರೆ ನಿಖಿಲ್ ಕಾಮತ್.
ಮೂರನೆಯದಾಗಿ, 12-15% ಆದಾಯ ನೀಡಬಲ್ಲ ಹೂಡಿಕೆ ಇರಲಿ ಎನ್ನುತ್ತಾರೆ ನಿಖಿಲ್ ಕಾಮತ್ (Zerodha Nikhil). ನೀವು ಬ್ಯಾಂಕ್ ಎಫ್‌ಡಿಯಲ್ಲಿ 6-7% ಬಡ್ಡಿ ಪಡೆಯಬಹುದು. ಆದರೆ 12-15% ಪ್ರತಿಫಲ ಸಿಗುವಂತಿರಬೇಕು. ಆಗ ನಿಮ್ಮ ದುಡ್ಡು ಬೆಳೆಯುತ್ತದೆ. ಹೀಗಾಗಿ ಷೇರು, ಮ್ಯೂಚುವಲ್ ಫಂಡ್ ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು.