ಶಿವಮೊಗ್ಗ: ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಸ್. ವಿಶ್ವನಾಥನ್ (89) (BS Viswanathan) ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಿಶ್ವನಾಥನ್ ಅವರು ಹಿರಿಯ ಸಹಕಾರಿ (Cooperative Leader) ಧುರೀಣರಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬಸರವಳ್ಳಿ ಗ್ರಾಮದ ವಿಶ್ವನಾಥನ್ ಅವರು ರಾಜ್ಯ ಭೂ ಬ್ಯಾಂಕ್ ಅಧ್ಯಕ್ಷ, ರಾಷ್ಟ್ರೀಯ ಸಹಕಾರಿ ತರಬೇತಿ ಕೇಂದ್ರದ ಅಧ್ಯಕ್ಷ, ತೀರ್ಥಹಳ್ಳಿ ಪುರಂದರ ವೇದಿಕೆ ಸ್ಥಾಪಕ, ಇಫ್ಕೋ ಸಂಸ್ಥೆಯ ನಿರ್ದೇಶಕ, ಕೆನರಾ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಲವಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ವಿಶ್ವನಾಥನ್ ಅವರು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಇವರಿಗೆ ಪತ್ನಿ ಶಾರದಾ, ಪುತ್ರ ಅವಿನಾಶ್, ಪುತ್ರಿ ಅರ್ಚನಾ ಇದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ವಿಶ್ವನಾಥನ್ ಅವರು ಚಿಕಿತ್ಸೆ ಫಲಿಸದೆ ಭಾನುವಾರ ನಿಧನರಾಗಿದ್ದಾರೆ.
ಎರಡು ಬಾರಿ ಪರಿಷತ್ ಸದಸ್ಯ
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇವರು ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ತೀರ್ಥಹಳ್ಳಿಯಲ್ಲಿ ಪುರಂದರ ವೇದಿಕೆ ಸ್ಥಾಪಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಿದ್ದರು.