ಬೆಂಗಳೂರು: ಹಿರಿಯ ವಿದ್ವಾಂಸ, ಪ್ರವಚನಕಾರ, ಗ್ರಂಥಕಾರ, ಉಡುಪಿ ಮೂಲದ ಸಗ್ರಿ ರಾಘವೇಂದ್ರ ಉಪಾಧ್ಯಾಯ (71) (Sagri Raghavendra Upadhyaya) ಅವರು ಬೆಂಗಳೂರಿನಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಪುತ್ರ ಇದ್ದಾರೆ.
ನರಸಿಂಹ ಉಪಾಧ್ಯಾಯ ಮತ್ತು ಸೀತಾಲಕ್ಷ್ಮಿ ದಂಪತಿಯ ಪುತ್ರನಾಗಿ 1953ರಲ್ಲಿ ಜನಿಸಿದ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಶ್ರೀ ವಿದ್ಯಾಮಾನ್ಯ ತೀರ್ಥರು, ಶೀ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶ್ರೀ ಕಾಪು ಹಯಗ್ರೀವಾಚಾರ್ಯರು ಮೊದಲಾದ ಪಂಡಿತರಲ್ಲಿ ಅಧ್ಯಯನ ಮಾಡಿ, ವೇದಾಂತ ಶಾಸ್ತ್ರದಲ್ಲಿ, ಸಂಸ್ಕೃತದಲ್ಲಿ ಎಂ.ಎ ಪಡೆದು ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜು, ಉಡುಪಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ
ತಮ್ಮದೇ ಆದ ಪರವಿದ್ಯಾ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ, ನೂರಾರು ಗ್ರಂಥಗಳನ್ನು ರಚಿಸಿದ್ದಾರೆ. ಉಡುಪಿಯ ಹಲವಾರು ಮಠಗಳಿಗೆ ಆಸ್ಥಾನ ವಿದ್ವಾಂಸರಾಗಿ ಗೌರವ ಮತ್ತು ಮಾನ್ಯತೆಗೆ ಭಾಜನರಾಗಿದ್ದರು. ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿ ಉತ್ತಮ ಹೆಸರು ಗಳಿಸಿರುವ ತತ್ವವಾದ ಮತ್ತು ಸರ್ವಮೂಲ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು.
ಸಗ್ರಿ ರಾಘವೇಂದ್ರ ಉಪಾಧ್ಯಾಯರು ಶುಕ್ರವಾರ ಸಂಜೆ ಬೆಂಗಳೂರಿನ ಶ್ರೀ ಭಂಡಾರಕೇರಿ ಮಠದಲ್ಲಿ ಶ್ರೀ ವಿದ್ಯೇಶತೀರ್ಥರ 70ನೇ ವರ್ಷದ ವರ್ಧಂತಿ ಕಾರ್ಯಕ್ರಮದಲ್ಲಿ ತಮ್ಮ ಕೊನೆಯ ಉಪನ್ಯಾಸ ನೀಡಿ, ನಂತರದ ಕೆಲವೇ ನಿಮಿಷಗಳಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ. ಹೃದಯಾಘಾತದಿಂದ ಬಳಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚೇತರಿಸಿಕೊಳ್ಳಲಾಗದೇ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಚಾಮರಾಜಪೇಟೆ ಚಿತಾಗಾರದಲ್ಲಿ ನೂರಾರು ವಿದ್ವಾಂಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.
ಇದನ್ನೂ ಒದಿ: Drown in Quarry: ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ತೀವ್ರ ಸಂತಾಪ: ಸಗ್ರಿ ರಾಘವೇಂದ್ರ ಉಪಾಧ್ಯಾಯ ಅವರ ನಿಧನಕ್ಕೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು, ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.