ಅಂಕೋಲಾ: ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅಂಕೋಲಾ ತಾಲೂಕಿನ ಅಂಬಾರಕೊಡ್ಲದ ವಿಷ್ಣು ನಾಯ್ಕ (80) (Vishnu Naik) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಗ್ರಾಮೀಣ ಸೊಗಡಿನೊಂದಿಗಿದ್ದ ಇವರ ಬರವಣಿಗೆ ಎಂಥವರನ್ನೂ ಆಕರ್ಷಿಸುತ್ತಿತ್ತು. ಸರಿಸುಮಾರು 50 ವರ್ಷಗಳ ಕಾಲ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಸಾಹಿತ್ಯ ಲೋಕದ ಚೇತನ ಇನ್ನಿಲ್ಲವಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ವಿಷ್ಣು ನಾಯ್ಕ ಅವರು ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ವಿಷ್ಣು ನಾಯ್ಕ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
1944ರಲ್ಲಿ ತಾಲೂಕಿನ ಅಂಬಾರಕೊಡ್ಲದಲ್ಲಿ ಜನಿಸಿದ್ದ ವಿಷ್ಣು ನಾಯ್ಕ ಅವರು ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಷ್ಣು ನಾಯ್ಕ ಅವರು, ತಮ್ಮ 50 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 25 ಸಂಪಾದಿತ ಕೃತಿಗಳನ್ನು ಒಳಗೊಂಡು 66 ಕೃತಿಗಳನ್ನು ರಚಿಸಿದ್ದಾರೆ.
ಕವನ, ನಾಟಕ, ಅಂಕಣ, ವಿಮರ್ಶೆ, ಕಥಾಸಂಕಲನ ಮತ್ತು ಜೀವನ ಪರಿಚಯಗಳ ಕೃತಿಗಳನ್ನು ಬರೆದಿದ್ದಾರೆ. 2007ರಲ್ಲಿ ಭಟ್ಕಳದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ರಾಘವೇಂದ್ರ ಪ್ರಕಾಶನದ ಮಾಲೀಕರು
ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು, ಅನೇಕ ಪ್ರಮುಖ ಕೃತಿಗಳನ್ನು ಬರೆದಿದ್ದಾರೆ. ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ಪ್ರೀತಿಯ ಪ್ರಶ್ನೆ (ಕವನ ಸಂಗ್ರಹಗಳು) ಕಣ್ಣೀರ ಕತೆಗಳು (ಸಂಕಲನ) ಅಯ್ನೋರ ಪೂಜೆ; ಒಂದು ಹನಿ ಮತ್ತು ಇತರ ಬೀದಿನಾಟಕಗಳು; ಯುದ್ಧ (ನಾಟಕಗಳು) ಡಾ. ಗೌರೀಶ ಕಾಯ್ಕಿಣಿ ಸಮಗ್ರ ಸಂಪುಟಗಳು (ಸಂಪಾದನೆ) ದುಡಿಯುವ ಕೈಗಳ ಹೋರಾಟದ ಕತೆ (ಮಾನವಿಕ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಈ ಪ್ರಕಾಶನದಲ್ಲಿ 183 ಗ್ರಂಥಗಳನ್ನು ಪ್ರಕಟಿಸಿದ್ದರು.
ಸಂದ ಪ್ರಶಸ್ತಿಗಳು ಹಲವು
ಕೆ.ಎಚ್. ಪಾಟೀಲರ ಸಂಪಾದಕತ್ವದಲ್ಲಿ ಹೊರ ತರುತ್ತಿದ್ದ ‘ವಿಶಾಲ ಕರ್ನಾಟಕ’ ದೈನಿಕ ಪತ್ರಿಕೆಯ ಪಾಕ್ಷಿಕ ಅಂಕಣಕಾರರಾಗಿ, ಮಂಗಳೂರಿನ ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದಲ್ಲಿ ತರುತ್ತಿದ್ದ ‘ಮುಂಗಾರು’ ದೈನಿಕ ಪತ್ರಿಕೆಯ ವರದಿಗಾರರಾಗಿ, ‘ಕರಾವಳಿ ಮುಂಜಾವು’, ‘ಕರಾವಳಿ ಸುಪ್ರಭಾತ’, ‘ಮುನ್ನಡೆ’, ‘ತೇಜಸ್ವಿ ಪ್ರಪಂಚ’, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿ ಕಾರ್ಯನಿರ್ವಹಣೆ. ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟರ ಕನ್ನಡ ಪರಿಚಾರಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿಗಳು ಅವರನ್ನರಸಿವೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ರಾಜ್ಯದಲ್ಲಿ ನಡೆದಿದ್ದ ಹಲವಾರು ಸಾಹಿತ್ಯ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿ ಮುನ್ನಡೆಸಿದ್ದರು.
ಮನೆಯ ಮಹಡಿಯಲ್ಲಿ ಸಾಹಿತ್ಯ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದ ಅವರು ಅಲ್ಲಿ ನಾಡಿನ ಹೆಸರಾಂತ ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ, ಉಭಯ ಕುಶಲೋಪರಿ ವಿನಿಮಯ, ಹೆಸರಾಂತ ಸಾಹಿತಿಗಳ ಕೈಬರಹ, ದಿನಕರ ದೇಸಾಯಿ ಅವರ ಸಾಹಿತ್ಯ ಕೃತಿಗಳನ್ನು ಇರಿಸಿದ್ದರು. ಅಲ್ಲದೆ, ದೇಶಿ ವಸ್ತುಗಳ ಸಂಗ್ರಹವನ್ನೂ ಇರಿಸಿದ್ದರು.
ವಿಷ್ಣು ನಾಯ್ಕ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ 11.30ಕ್ಕೆ ಅಂಬಾರಕೊಡ್ಲ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಂಬನಿ ಮಿಡಿದ ಉ.ಕ. ಜಿಲ್ಲಾ ಕಸಾಪ
“ನಾಡಿನ ಹಿರಿಯ ಸಾಹಿತಿ, ಕವಿ, ಅಂಕೋಲೆಯ ವಿಷ್ಣು ನಾಯ್ಕರು ನಮ್ಮನಗಲಿದರೆಂದು ತಿಳಿಸಲು ವಿಷಾಧಿಸುವೆ. ತಮ್ಮ ಪ್ರಗತಿಪರ ಬರಹ, ಚಿಂತನಶೀಲ ಮಾತು, ಜೀವನ ಪ್ರೀತಿಯ ಕಾವ್ಯ, ಶಿಸ್ತಿನ ಸಂಘಟನೆ, ಸರಳತೆಯ ಬದುಕಿನ ಮೂಲಕ ನಾಡಿನಾದ್ಯಂತ ಚಿರ ಪರಿಚಿತರಾಗಿದ್ದ ವಿಷ್ಣು ನಾಯ್ಕರು, ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೂ ಅಗಿದ್ದ ಇವರು ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ನನ್ನ ಗುರುಗಳೂ ಕೂಡಾ ಆಗಿದ್ದರು. ಇವರ ಅಗಲಿಕೆ ವೈಯಕ್ತಿಕವಾಗಿ ನನಗಂತೂ ಸಹಿಸಿಕೊಳ್ಳಲಾಗದಂತಹ ವೇದನೆಯಾಗಿದೆ. ನಾಡಿನ ಅಕ್ಷರಲೋಕಕ್ಕೂ ತುಂಬಲಾರದ ನಷ್ಟ. ಉಸಿರು ನಿಲ್ಲಿಸಿದ ಆ ಹಿರಿಯ ಚೇತನಕ್ಕೆ ನಮನಗಳು” ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್. ವಾಸರೆ ಕಂಬನಿ ಮಿಡಿದಿದ್ದಾರೆ.