Site icon Vistara News

Jayalalitha Jewellery : ಜಯಲಲಿತಾ ಆಭರಣ ಒಯ್ಯಲು ಆರು ಟ್ರಂಕ್‌ ತನ್ನಿ ಎಂದ ಕೋರ್ಟ್‌!

Jayalalitha Jewellery new

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ (Jayalalitha Jewellery) ಅವರನ್ನು 2014ರಲ್ಲಿ ಅಕ್ರಮ ಆಸ್ತಿ ಪ್ರಕರಣದಡಿ (Illegal asset) ಬಂಧಿಸುವ ವೇಳೆ ವಶಪಡಿಸಿಕೊಳ್ಳಲಾದ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ (Tamilnadu Government) ಮರಳಿಸಲು ರಾಜ್ಯದ ವಿಶೇಷ ಸಿಬಿಐ ಕೋರ್ಟ್‌ (Special CBI Court) ದಿನ ನಿಗದಿ ಮಾಡಿದೆ. ಈ ಆಭರಣಗಳನ್ನು ಕೊಂಡೊಯ್ಯಲು ಆರು ದೊಡ್ಡ ಟ್ರಂಕ್‌ ಮತ್ತು ಅಗತ್ಯ ಭದ್ರತೆಯೊಂದಿಗೆ ಬರುವಂತೆ ಸೂಚಿಸಲಾಗಿದೆ.

ದಿವಂಗತ ಜೆ ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಸ್ವೀಕರಿಸಲು ಆರು ದೊಡ್ಡ ಟ್ರಂಕ್‌ ಹಾಗೂ ಅಗತ್ಯ ಭದ್ರತೆಯೊಂದಿಗೆ ಬರುವಂತೆ ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ಸೂಚಿಸಿದರು.

ತಮಿಳುನಾಡು ಸರ್ಕಾರವು ಜಯಲಲಿತಾ ಅವರಿಗೆ ಸಂಬಂಧಿಸಿದ ಆಭರಣ ಸ್ವೀಕರಿಸುವುದರ ಕುರಿತು ಆದೇಶ ಮಾಡಿದ್ದು, ಇದನ್ನು ಸ್ವೀಕರಿಸಲು ಮಾರ್ಚ್‌ 6ರಂದು ತಮಿಳುನಾಡಿನ ಪೊಲೀಸ್‌ ಮಹಾನಿರ್ದೇಶಕರ ಜೊತೆಗೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು. ಅವರ ತಮ್ಮ ಜೊತೆಗೆ ಆರು ದೊಡ್ಡ ಟ್ರಂಕ್‌ ತರೆಬೇಕು, ಜೊತೆಗೆ ಫೋಟೊಗ್ರಾಫರ್‌, ವಿಡಿಯೊ ಗ್ರಾಫರ್‌ ಹಾಗೂ ಸೂಕ್ತ ಭದ್ರತೆಯನ್ನು ಕರೆ ತರಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Jayalalitha Jewellery : ಏನಿದು ಅಕ್ರಮ ಆಸ್ತಿ ಮತ್ತು ಚಿನ್ನಾಭರಣ ವಶ ಪ್ರಕರಣ?

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು ಜಯಲಲಿತಾ ಅವರನ್ನು ಈ ಹಿಂದೆ ಬಂಧಿಸಿದ್ದರು. ರಾಜ್ಯದ ಹೊರಗಡೆ ವಿಚಾರಣೆ ನಡೆಸಬೇಕು ಎಂಬ ಬೇಡಿಕೆಯನ್ವಯ ಬೆಂಗಳೂರಿನಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವಿಚಾರಣೆ ನಡೆದು ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾಗೆ ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ 27ರಂದು ಆದೇಶಿಸಿತ್ತು. ಜೊತೆಗೆ ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು.

ವಿಶೇಷ ನ್ಯಾಯಾಲಯವು 2024ರ ಜನವರಿ 22ರಂದು ಜಯಲಲಿತಾ ಅವರ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಕರ್ನಾಟಕದ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್‌ ಇಲಾಖೆಗೆ ಆದೇಶಿಸಿತ್ತು. ವಸ್ತುಗಳನ್ನು ಪರಿಶೀಲಿಸಿ ಪಡೆಯಲು ಕಾರ್ಯದರ್ಶಿ ಮಟ್ಟದಲ್ಲಿ ಸೂಕ್ತ ವ್ಯಕ್ತಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರ್ಕಾರದ ಗೃಹ ಇಲಾಖೆಗೆ ನ್ಯಾಯಾಲಯ ನಿರ್ದೇಶಿಸಿತ್ತು.

ತಮಿಳುನಾಡು ಸರ್ಕಾರದ ಗೃಹ ಇಲಾಖೆಯು ಫೆಬ್ರವರಿ 16ರಂದು ಹೊರಡಿಸಿರುವ ಆದೇಶವನ್ನು ತಮಿಳುನಾಡಿನ ವಿಚಕ್ಷಣಾ ನಿರ್ದೇಶನಾಲಯ ಮತ್ತು ಎಸಿಬಿಯ ಡಿವೈಎಸ್‌ಪಿ ಸಲ್ಲಿಸಿದ್ದಾರೆ. ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು ಹಾಗೂ ಭ್ರಷ್ಟಾಚಾರ ನಿಗ್ರಹ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನು ಜಯಲಲಿತಾ ಅವರ ಆಭರಣವನ್ನು ನ್ಯಾಯಾಲಯದಿಂದ ಸುಪರ್ದಿನಿಂದ ಪಡೆಯಲು ನೇಮಕ ಮಾಡಲಾಗಿದೆ ಎಂದು ತಮಿಳುನಾಡು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಜಯಲಲಿತಾ ಅವರ ಆಭರಣಗಳನ್ನು ಸ್ವೀಕರಿಸಲು ತಮಿಳುನಾಡು ಸರ್ಕಾರವು ಅಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಅವುಗಳನ್ನು ಹಸ್ತಾಂತರಿಸಲು ದಿನಾಂಕ ನಿಗದಿಪಡಿಸಬೇಕಿದೆ. ಉಭಯ ವಕೀಲರ ವಾದ ಆಲಿಸಿದ ಬಳಿಕ ಮಾರ್ಚ್‌ 6 ಮತ್ತು 7ರಂದು ಆಭರಣ ಹಸ್ತಾಂತರಿಸಲಾಗುವುದು. ಅಂದು ಯಾವುದೇ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬಾರದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ : Jayalalitha: ಬೆಂಗಳೂರಿನಿಂದ ಜಯಯಲಿತಾ ಚಿನ್ನಾಭರಣ ಕೊಂಡೊಯ್ಯಲು ತಮಿಳುನಾಡಿನಿಂದ ಬರಲಿದೆ 6 ಟ್ರಕ್ಕು!

ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ರಿಜಿಸ್ಟ್ರಿಯು ಆಭರಣ ವರ್ಗಾವಣೆ ಮಾಡುವ ಎರಡು ದಿನಗಳ ಕಾಲ ಸ್ಥಳೀಯ ಪೊಲೀಸರ ಜೊತೆಗೂಡಿ ಅಗತ್ಯ ಭದ್ರತೆ ಒದಗಿಸಬೇಕು. ನ್ಯಾಯಾಲಯದ ಈ ಆದೇಶವನ್ನು ತಮಿಳುನಾಡಿನ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಿಟಿ ಸಿವಿಲ್‌ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ಉಪಸ್ಥಿರಿರುವ ತಮಿಳುನಾಡಿನ ವಿಚಕ್ಷಣಾ ದಳದ ಡಿವೈಎಸ್‌ಪಿ ತಿಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Jayalalitha Jewellery : ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಆಭರಣಗಳು ಇವು

  1. 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು
  2. 700 ಕೆ ಜಿ ತೂಕದ ಬೆಳ್ಳಿ ಆಭರಣಗಳು
  3. 740 ದುಬಾರಿ ಚಪ್ಪಲಿಗಳು
  4. 11,344 ರೇಷ್ಮೆ ಸೀರೆಗಳು
  5. 250 ಶಾಲು
  6. 12 ರೆಫ್ರಿಜೆರೇಟರ್
  7. 10 ಟಿ ವಿ ಸೆಟ್, 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿಡಿ ಪ್ಲೇಯರ್,
  8. 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್‌ ರೇಕಾರ್ಡರ್
  9. 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್,
  10. 1,93,202 ರೂಪಾಯಿ ನಗದು
Exit mobile version