ನವ ದೆಹಲಿ: ನಾಲ್ವರು ಯುವಕರನ್ನು ಒಳಗೊಂಡ ಗುಂಪೊಂದು 17 ವರ್ಷದ ಹುಡುಗನಿಗೆ ಥಳಿಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಇವರಿಗೆಲ್ಲ ಸಿಗರೇಟ್‌ಗೆ ದುಡ್ಡು ಬೇಕಿತ್ತು. ಆ ಹುಡುಗನ ಬಳಿ ಹೋಗಿ 10 ರೂಪಾಯಿ ಕೇಳಿದ್ದಾರೆ. ಆದರೆ ಆತ ಹಣ ಕೊಡಲು ನಿರಾಕರಿಸಿದ. ಅಷ್ಟಕ್ಕೇ ತಾಳ್ಮೆಗೆಟ್ಟ ಈ ಯುವಕರು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟಕ್ಕೂ ಬಿಡದೆ ಚಾಕುವಿನಿಂದ ಇರಿದು ಜೀವ ತೆಗೆದಿದ್ದಾರೆ. ಈ ಘಟನೆ ನಡೆದಿದ್ದು ದೆಹಲಿಯ ಆನಂದ್ ಪರ್ಬತ್‌ನಲ್ಲಿ. ನಾಲ್ವರನ್ನೂ ಪೊಲೀಸರು ಬಂಧಿಸಿದ್ದು, ಅವರನ್ನು ಪ್ರವೀಣ್ (20), ಅಜಯ್ (23), ಸೋನು ಕುಮಾರ್ (24), ಜತಿನ್ (24) ಎಂದು ಗುರುತಿಸಲಾಗಿದೆ.
ಘಟನೆ ಬಗ್ಗೆ ಡಿಸಿಪಿ ಶ್ವೇತಾ ಚೌಹಾಣ್ ಮಾಹಿತಿ ನೀಡಿದ್ದು, ರಾಮ್ಜಾಸ್ ಶಾಲೆಯ ಎಚ್.ಆರ್.ರಸ್ತೆಯ ಬಳಿ ಯುವಕನೊಬ್ಬ ಎಚ್ಚರ ತಪ್ಪಿ ಬಿದ್ದಿದ್ದಾನೆ ಎಂದು ಮಾಹಿತಿ ಸಿಕ್ಕಿತು. ಕೂಡಲೇ ಸ್ಥಳಕ್ಕೆ ಹೋದೆವು. ಅಲ್ಲಿ ಹೋಗಿ ನೋಡಿದರೆ ಯುವಕನ ಸ್ಥಿತಿ ಗಂಭೀರವಾಗಿತ್ತು. ಹೊಟ್ಟೆಯ ಮೇಲ್ಭಾಗಕ್ಕೆ ಚಾಕುವಿನಿಂದ ಇರಿಯಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಆತನ ಜೀವ ಅಷ್ಟರಲ್ಲೇ ಹೋಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಯೋವರೆಗೆ ಜೈಲು ಶಿಕ್ಷೆಗೆ ಒಳಗಾದ ಯಾಸಿನ್ ಮಲಿಕ್ ಯಾರು? ಮಾಡಿದ ಅಪರಾಧವೇನು?
ಮೃತ ಯುವಕನನ್ನು ವಿಜಯ್ ಎಂದು ಗುರುತಿಸಲಾಗಿದ್ದು ಬಲ್ಜೀತ್ ನಗರದ ನಿವಾಸಿ. ಸಿಸಿಟಿವಿ ಫೂಟೇಜ್‌ಗಳ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಆರೋಪಿಗಳ ಪತ್ತೆಗೆ ಆನಂದ್ ಪರ್ಬತ್ ಪೊಲೀಸ್ ಠಾಣೆ ಅಧಿಕಾರಿಗಳಾದ ಮುಕೇಶ್ ಅಂಟಿಲ್ ಮತ್ತು ಯೋಗೇಂದ್ರ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದು ಸಿಗರೇಟ್‌ಗಾಗಿ ನಡೆದ ಜಗಳ ಎಂದು ಹೇಳಲಾಗಿದೆ. ಆದರೆ ಈ ಹಿಂದೆ ವಿಜಯ್ ಮತ್ತು ಆ ನಾಲ್ವರು ಯುವಕರ ನಡುವೆ ಏನಾದರೂ ಮನಸ್ತಾಪ, ಘರ್ಷಣೆ ನಡೆದಿತ್ತಾ. ಹಳೇ ವೈಷಮ್ಯ ಏನಾದರೂ ಇತ್ತಾ? ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಶ್ವೇತಾ ಚೌಹಾಣ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ʼಅಂಥವರಿಗೆ ವಿಮಾನ ಹತ್ತಲು ಬಿಡಲೇಬೇಡಿʼ: ಡಿಜಿಸಿಎಗೆ ದೆಹಲಿ ಹೈಕೋರ್ಟ್‌ನಿಂದ ಮಹತ್ವದ ಆದೇಶ