ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಅಮೆಜಾನ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ (Amazon Manager) ಆಗಿದ್ದ ಹರ್‌ಪ್ರೀತ್ ಗಿಲ್ (36) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ವರ್ಷದ ಬಿಲಾಲ್ ಗನಿ ಎಂಬಾತನನ್ನು ಬಂಧಿಸಿದ್ದಾರೆ.
ಬಿಲಾಲ್ ಗಿನಿ ಸೇರಿ ಐವರು ಸ್ನೇಹಿತರು ಮಂಗಳವಾರ ರಾತ್ರಿ (ಆಗಸ್ಟ್ 29) 11.30ರ ಸುಮಾರಿಗೆ ಸುಭಾಷ್ ವಿಹಾರಕ್ಕೆ ನೈಟ್‌ಔಟ್ ಹೋಗಿದ್ದಾರೆ. ನೈಟ್‌ಔಟ್ ಮಜಾ ಅನುಭವಿಸುತ್ತ, ಅಲ್ಲಲ್ಲಿ ಗಾಡಿಗಳನ್ನು ನಿಲ್ಲಿಸಿ ಫೋಟೊ ತೆಗೆದುಕೊಳ್ಳುತ್ತ ಸಾಗಿದ ಅವರು ಭಜನ್‌ಪುರ ಪ್ರದೇಶದ ಇಕ್ಕಟ್ಟಾದ ರಸ್ತೆಯೊಂದಕ್ಕೆ ತೆರಳಿದ್ದಾರೆ. ಎರಡು ಸ್ಕೂಟಿಗಳಲ್ಲಿ ಐವರು ತೆರಳುವಾಗ ಹರ್‌ಪ್ರೀತ್ ಗಿಲ್ ಹಾಗೂ ಅವರ ಸಂಬಂಧಿ ಇದ್ದ ಬೈಕ್ ಎದುರಿನಿಂದ ಬಂದಿದೆ. ಆಗ ಐವರು ಯುವಕರು ಹಾಗೂ ಹರ್‌ಪ್ರೀತ್ ಗಿಲ್ ಮಧ್ಯೆ ವಾಗ್ವಾದ ಉಂಟಾಗಿದೆ.
ಆರೋಪಿಯನ್ನು ಬಂಧಿಸಿದ ಪೊಲೀಸರು
ಕ್ಷುಲ್ಲಕ ಕಾರಣಕ್ಕೆ ಗುಂಡಿನ ದಾಳಿ
ಕಿರಿದಾದ ಜಾಗದಲ್ಲಿ ಎದುರು ಬಂದ ಕಾರಣ ಐವರು ಯುವಕರು ಹರ್‌ಪ್ರೀತ್ ಗಿಲ್‌ಗೆ ನಿಂದಿಸಿದ್ದಾರೆ. ಹೀಗೆ ವಾಗ್ವಾದ ನಡೆಯಬೇಕಾದರೆ ಐವರಲ್ಲಿ ಇಬ್ಬರು ಗಿಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ವೇಳೆ ಹರ್‌ಪ್ರೀತ್ ಗಿಲ್ ಮೃತಪಟ್ಟರೆ, ಅವರ ಸಂಬಂಧಿಯು ಗಾಯಗೊಂಡಿದ್ದಾರೆ. ಹೀಗೆ, ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿದ ಐವರು ಅಲ್ಲಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: Double Murder: ತಮ್ಮನಿಂದಲೇ ಅಣ್ಣ-ಅತ್ತಿಗೆಯ ಬರ್ಬರ ಹತ್ಯೆ; ಆಸ್ತಿ ವಿಚಾರಕ್ಕೆ ಜೋಡಿ ಕೊಲೆ
ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಆಗಸ್ಟ್ 31ರ ಬೆಳಗಿನ ಜಾವ ಸಿಗ್ನೇಚರ್ ಬ್ರಿಡ್ಜ್ ಬಳಿ ಬಿಲಾಲ್ ಗಿನಿಯನ್ನು ಬಂಧಿಸಿದ್ದಾರೆ. ಉಳಿದವರನ್ನು ಮೊಹಮ್ಮದ್ ಸಮೀರ್, ಸೊಹೇಲ್, ಮೊಹಮ್ಮದ್ ಜುನೈದ್ ಹಾಗೂ ಅದ್ನಾನ್ ಎಂದು ಗುರುತಿಸಲಾಗಿದೆ. ಎಲ್ಲರೂ 25 ವರ್ಷದೊಳಗಿನವರಾಗಿದ್ದು, ನೈಟ್‌ಔಟ್ ವೇಳೆ ಇಬ್ಬರು ಬಂದೂಕು ಇಟ್ಟುಕೊಂಡಿದ್ದರು ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಹಾಗೆಯೇ, ಉಳಿದ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.