Site icon Vistara News

ಹೈದರಾಬಾದ್‌ ಅಪ್ರಾಪ್ತೆ ಗ್ಯಾಂಗ್‌ ರೇಪ್‌; ಟಿಆರ್‌ಎಸ್‌ ಮುಖಂಡನ ಪುತ್ರ ಸೇರಿ ಇಬ್ಬರ ಬಂಧನ

Hyderabad

ಹೈದರಾಬಾದ್‌: ನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬಾತ ಟಿಆರ್‌ಎಸ್‌ ಮುಖಂಡ ಮತ್ತು ಸ್ಥಳೀಯ ವಕ್ಫ್‌ಬೋರ್ಡ್‌ ಅಧ್ಯಕ್ಷನ ಪುತ್ರ ಎನ್ನಲಾಗಿದೆ. ಇನ್ನೂ ಮೂವರನ್ನು ಅರೆಸ್ಟ್‌ ಮಾಡುವುದು ಬಾಕಿ ಇದೆ. ಗ್ಯಾಂಗ್‌ ರೇಪ್‌ ನಡೆದಿದ್ದು ಮೇ 28ರಂದು ಒಂದು ಮರ್ಸಿಡಿಸ್‌ ಕಾರಿನಲ್ಲಿ. ಆದರೆ ಅಪ್ರಾಪ್ತೆ ದೂರು ನೀಡಿದ್ದು ಮೇ 31ಕ್ಕೆ. ಅದಾದ ಮೂರು ದಿನಗಳ ನಂತರ ಇಬ್ಬರು ಆರೋಪಿಗಳ ಬಂಧನವಾಗಿದೆ. ಅಂದಹಾಗೇ, ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಐವರಲ್ಲಿ, ಮೂವರು ಅಪ್ರಾಪ್ತರಾಗಿದ್ದು, ಇಬ್ಬರು 18ವರ್ಷ ಮೇಲ್ಪಟ್ಟವರು. ಆರೋಪಿಗಳೆಲ್ಲ ಪ್ರಭಾವಿಗಳು, ಶ್ರೀಮಂತರು, ರಾಜಕಾರಣಿಗಳ ಮಕ್ಕಳೇ ಇದ್ದಾರೆ. ಅದರಲ್ಲೂ ಒಬ್ಬಾತ ಸ್ಥಳೀಯ ಶಾಸಕನ ಪುತ್ರ. ಹಾಗಾಗಿ ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು ದೃಢಪಟ್ಟಿದೆ. ಆರೋಪಿಗಳು ಯಾರು ಎಂಬುದನ್ನು ಪತ್ತೆಹಚ್ಚಲಾಗಿದೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಮೂವರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿಕೆ ಕೊಟ್ಟಿರುವ ಸ್ಥಳೀಯ ಪೊಲೀಸ್‌ ಅಧಿಕಾರಿ ರಾಜಶೇಖರ್‌ ರೆಡ್ಡಿ, ಬಿಜೆಪಿಯ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಿಗೆ ಸೇರಿದ ಮರ್ಸಿಡಿಸ್‌ ಕಾರಿನಲ್ಲಿ ಅತ್ಯಾಚಾರ ನಡೆದಿದ್ದು, ಆ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರ ಚಾಲಕನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆ ಹೋಗಿದ್ದ ಪಬ್‌ನ ಸುತ್ತಮುತ್ತ ಇರುವ ಸುಮಾರು 6 ಸಿಸಿಟಿವಿ ಕ್ಯಾಮರಾಗಳ ಫೂಟೇಜ್‌ಗಳನ್ನು ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.

ಭಯಾನಕ ಕ್ಷಣ..
ಮೇ 28ರಂದು 17ವರ್ಷದ ಅಪ್ರಾಪ್ತೆ ತನ್ನ ಸ್ನೇಹಿತನೊಂದಿಗೆ ಪಬ್‌ಗೆ ಹೋಗಿದ್ದಳು. ಅವರ ಪರಿಚಯದ ಯಾರದ್ದೋ ಬರ್ತ್‌ ಡೇ ನಿಮಿತ್ತ ಅಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿತ್ತು. ಸ್ವಲ್ಪ ಹೊತ್ತಾದ ಬಳಿಕ ಆಕೆಯೊಂದಿಗೆ ಹೋಗಿದ್ದ ಸ್ನೇಹಿತ ಏನೋ ಕಾರಣಕ್ಕೆ ಬೇಗನೇ ಅಲ್ಲಿಂದ ಹೊರಟ. ಆತ ಹೋಗುತ್ತಿದ್ದಂತೆ, ಇತ್ತ ಈ ಐವರ ಹುಡುಗರ ಜತೆ ಬಾಲಕಿಗೆ ಪರಿಚಯವಾಯಿತು. ಎಲ್ಲರೂ ಹರಟುತ್ತ-ಮಾತನಾಡುತ್ತ ಸ್ವಲ್ಪ ಹೊತ್ತಲ್ಲೇ ಸ್ನೇಹಿತರಾದರು. ನಂತರ ಅವರು ತಾವೇ ಮನೆಗೆ ಡ್ರಾಪ್‌ ಕೊಡುವುದಾಗಿ ಯುವತಿಗೆ ಹೇಳಿದ್ದಾರೆ. ಆಕೆಯ ಸ್ನೇಹಿತ ಕೂಡ ಇಲ್ಲದ ಕಾರಣ ಅವಳೂ ಸಹಜವಾಗಿಯೇ ಒಪ್ಪಿಕೊಂಡಳು. ಎಲ್ಲರೂ ಮರ್ಸಿಡಿಸ್‌ ಕಾರಿನಲ್ಲಿ ಹೊರಟರು. ಮೊದಲು ಒಂದು ಬೇಕರಿಗೆ ಹೋಗಿ ಸ್ವಲ್ಪ ಸ್ನ್ಯಾಕ್ಸ್‌ ಖರೀದಿ ಮಾಡಿದರು. ಅಲ್ಲಿಂದ ಮುಂದೆ ಹೋಗಿ ಕತ್ತಲಿರುವ ಜಾಗದಲ್ಲಿ ಕಾರಿನಲ್ಲಿಯೇ ಒಬ್ಬರಾದ ಬಳಿಕ ಮತ್ತೊಬ್ಬರು ರೇಪ್‌ ಮಾಡಿದ್ದಾರೆ. ಅಷ್ಟು ಮಾಡಿ, ವಾಪಸ್‌ ಪಬ್‌ ಬಳಿಯೇ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ.

ಅಲ್ಲಿಂದ ಅಪ್ರಾಪ್ತೆ ಹೇಗೋ ಮನೆ ಸೇರಿಕೊಂಡಿದ್ದಾಳೆ. ಆದರೆ ಆಕೆಯ ಕೈಯ ಮೇಲೆಲ್ಲ ಗಾಯಗಳಾಗಿದ್ದವು. ಅದನ್ನು ಗಮನಿಸಿದ ಪಾಲಕರು ಏನಾಯಿತು ಎಂದು ಕೇಳಿದ್ದಾರೆ. ಮೊದಲು ತನ್ನ ಮೇಲೆ ಹಲ್ಲೆಯಾಯಿತು ಎಂದು ಹೇಳಿಕೊಂಡರೂ, ಬಳಿಕ ಒಪ್ಪಿಕೊಂಡಿದ್ದಾಳೆ. ನಂತರ ತಂದೆ ಪೊಲೀಸ್‌ ಸ್ಟೇಶನ್‌ಗೆ ಆಕೆಯನ್ನೇ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ. ಮಹಿಳಾ ಪೊಲೀಸ್‌ ಬಳಿ ಈಕೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ನಂತರ ವೈದ್ಯಕೀಯ ತಪಾಸಣೆಯನ್ನು ನಡೆಸಿದಾಗ ಆಕೆ ಮೇಲೆ ಅತ್ಯಾಚಾರವಾಗಿದ್ದು ದೃಢಪಟ್ಟಿದೆ. ಹುಡುಗಿ ತುಂಬ ಶಾಕ್‌ನಲ್ಲಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಬಾಲಕಿಯ ಗ್ಯಾಂಗ್‌ ರೇಪ್‌, ಐವರು ಆರೋಪಿಗಳೂ ಪಿಯುಸಿ ಹುಡುಗ್ರು!

Exit mobile version