Site icon Vistara News

ಎರಡೇ ದಿನದ ಅಂತರದಲ್ಲಿ ಅಣ್ಣ-ತಮ್ಮ ಇಬ್ಬರನ್ನೂ ಕೊಂದ ಬೀದಿನಾಯಿಗಳು; ಮಕ್ಕಳನ್ನು ಕಳೆದುಕೊಂಡ ತಾಯಿಯದ್ದು ಗೋಳಾಟ

2 children Killed By stray dogs In Delhi

#image_title

ನವ ದೆಹಲಿ: ಮಹಿಳೆಯೊಬ್ಬರು ಎರಡು ದಿನಗಳ ಅಂತರದಲ್ಲಿ ತಮ್ಮಿಬ್ಬರೂ ಮಕ್ಕಳನ್ನು ಕಳೆದುಕೊಂಡ ಮನಮಿಡಿಯುವ ಘಟನೆ ದೆಹಲಿಯ ವಸಂತ್​​ಕುಂಜ್​ ಏರಿಯಾದಲ್ಲಿ ನಡೆದಿದೆ. ಈ ಇಬ್ಬರೂ ಪುಟ್ಟ ಬಾಲಕರೂ ಬೀದಿನಾಯಿಗಳಿಗೇ ಆಹಾರವಾಗಿ ಮೃತಪಟ್ಟಿದ್ದು, ಇನ್ನೂ ದುರಂತ. ಆನಂದ್​(7) ಮತ್ತು ಆದಿತ್ಯ (5) ಹೀಗೆ ದಾರುಣವಾಗಿ ಮೃತಪಟ್ಟ ಬಾಲಕರಾಗಿದ್ದಾರೆ.

ವಸಂತ್​ಕುಂಜ್​ನಲ್ಲಿ ಅರಣ್ಯ ಪ್ರದೇಶ ಸಮೀಪವೇ ಇರುವ ಒಂದು ಸ್ಲಮ್​ ಏರಿಯಾದ ಪುಟ್ಟ ಮನೆಯಲ್ಲಿ ಮಹಿಳೆ, ಆಕೆಯ ಪತಿ, ಇಬ್ಬರು ಮಕ್ಕಳು ವಾಸವಾಗಿದ್ದರು. ಶುಕ್ರವಾರ ಮೊದಲು ಆನಂದ್​ ಕಾಣದಂತಾದ. ಆ ತಾಯಿ ಇಡೀ ಏರಿಯಾ ಹುಡುಕಾಡಿದರು. ಸಿಕ್ಕಸಿಕ್ಕವರ ಬಳಿಯೆಲ್ಲ, ತನ್ನ ಮಗನನ್ನು ಕಂಡಿರಾ ಎಂದು ಕೇಳುತ್ತ ತಿರುಗಾಡಿದರು. ಆದರೆ ಆತ ಸಿಗಲಿಲ್ಲ. ಹೀಗೆ ಎಲ್ಲರೂ ಸೇರಿ ಸುಮಾರು 2 ತಾಸುಗಳ ಕಾಲ ಹುಡುಕಾಡಿದ ಬಳಿಕ ಬಾಲಕನ ಮೃತದೇಹ ಪತ್ತೆಯಾಯಿತು. ಆತನ ಮೈಮೇಲೆ ಪ್ರಾಣಿದಾಳಿಯ ಗುರುತು ಇತ್ತು. ಅದನ್ನು ನೋಡಿದರೆ, ಮೇಲ್ನೋಟಕ್ಕೆ ಬೀದಿನಾಯಿಗಳ ದಾಳಿಯಂತೆ ಗೋಚರಿಸುತ್ತದೆ. ಹಾಗೇ, ಅರಣ್ಯ ಸಮೀಪವೇ ಆಗಿದ್ದರಿಂದ, ಹಂದಿ ಅಥವಾ ಆಡುಗಳು ದಾಳಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದ್ದರೂ, ಗಾಯ ನೋಡಿದರೆ, ಅದು ಬೀದಿ ನಾಯಿ ದಾಳಿಯದ್ದೇ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Street dog attack | ಮಲಗಿದ್ದ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿನಾಯಿಗಳು

ಅದಾಗಿ ಎರಡೇ ದಿನಕ್ಕೆ ಮೃತ ಆನಂದ್ ಸಹೋದರ ಆದಿತ್ಯ ಕೂಡ ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದಾನೆ. ಐದು ವರ್ಷದ ಆದಿತ್ಯ ಮತ್ತು ಅವನ ಕೆಲವು ಸಹೋದರ ಸಂಬಂಧಿ ಹುಡುಗರು ಮೂತ್ರ ವಿಸರ್ಜನೆ ಮಾಡಲು ಹೋಗುತ್ತಿದ್ದರು. ಅದರಲ್ಲಿ ಚಂದನ್ ಎಂಬ ಹುಡುಗ ಆದಿತ್ಯನಿಗಿಂತಲೂ ಮುಂದೆ ಹೋಗಿದ್ದ. ತನ್ನ ಹಿಂದೆ ಆದಿತ್ಯ ಇದ್ದಾನೆ ಎಂದೇ ಅವನು ಅಂದುಕೊಂಡಿದ್ದ. ಆದರೆ ಆತ ಮೂತ್ರ ಮಾಡಿ ವಾಪಸ್​ ಬಂದಾಗ ಆದಿತ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಅವನ ಸುತ್ತಲೂ ಬೀದಿನಾಯಿಗಳು ಸುತ್ತುವರಿದಿದ್ದವು. ಅದಾಗಲೇ ಆನಂದನ ಸಾವಿನ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಅದೇ ಹೊತ್ತಿಗೆ ಆ ಮಾರ್ಗದಲ್ಲಿ ಬಂದರು. ಅವರೇ ನಾಯಿಗಳನ್ನು ಓಡಿಸಿ, ಆದಿತ್ಯನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಆದಿತ್ಯನ ಜೀವ ಹೋಗಿಯಾಗಿತ್ತು. ಇದೀಗ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ತಾಯಿ ಗೋಳಿಡುತ್ತಿದ್ದಾರೆ.

ಇದನ್ನೂ ಓದಿ: BlackBuck | ಕಾಡಿನಿಂದ ನಾಡಿಗೆ ಬಂದಿದ್ದ ಕೃಷ್ಣ ಮೃಗವನ್ನು ಬೇಟೆಯಾಡಿದ ಬೀದಿನಾಯಿಗಳು

Exit mobile version