ಪಟನಾ: ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದು, ಸಾರ್ವಜನಿಕ ಉಪಕರಣಗಳನ್ನು ಕದಿಯುವುದು ಭಾರತದಲ್ಲಿ ಸರ್ವೇಸಾಮಾನ್ಯ ಎಂಬಂತಾಗಿದೆ. ಅಷ್ಟರಮಟ್ಟಿಗೆ, ಠಕ್ಕ ಮನಸ್ಥಿತಿಯ ಜನ ನಮ್ಮ ನಡುವೆ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಬಿಹಾರದಲ್ಲಿ ಎರಡು ಕಿ.ಮೀ ಉದ್ದದ ರೈಲು ಹಳಿಗಳನ್ನೇ (Railway Tracks Stolen) ದುರುಳರು ಕಳ್ಳತನ ಮಾಡಿದ್ದಾರೆ. ಆ ಮೂಲಕ ದೇಶದ ಏಳಿಗೆಗೆ, ಸಾರ್ವಜನಿಕ ಸೌಕರ್ಯಗಳಿಗೆ ನಮ್ಮ ಸುತ್ತಮುತ್ತಲಿನ ಜನರೇ ಅಡ್ಡಗಾಲು ಹಾಕುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಳೆದ ಜನವರಿಯಲ್ಲಿಯೇ ಸಮಷ್ಟಿಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ರೈಲು ಹಳಿಗಳ ಕಳ್ಳತನವಾಗಿದ್ದು, ಪ್ರಕರಣವು ತಡವಾಗಿ ಸುದ್ದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ರಕ್ಷಣಾ ಪಡೆಯ (RPF) ಇಬ್ಬರು ಉದ್ಯೋಗಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ. ಎಫ್‌ಐಆರ್ ಕೂಡ ದಾಖಲಾಗಿದೆ. ಇನ್ನು, ರೈಲು ಹಳಿ ಕಳ್ಳತನವಾದ ಪ್ರದೇಶದ ಫೋಟೊ ವೈರಲ್ ಆಗಿದೆ.
ಕಳ್ಳತನಕ್ಕೆ ಸಂಬಂಧಿಸಿದಂತೆ ಅನಿಲ್ ಯಾದವ್ ಹಾಗೂ ಆತನ ಪುತ್ರ ರಾಹುಲ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಕುಮಾರ್ ಇದಕ್ಕೂ ಮೊದಲು ಶುಗರ್ ಮಿಲ್‌ನಲ್ಲಿ ಗುಜರಿ ಕೆಲಸ ಮಾಡಿಕೊಂಡು ಇದ್ದ. ಹಳಿ ಮಾರಾಟ ಮಾಡಿ ಹಣ ಸಂಪಾದಿಸುವ ದಿಸೆಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral News: 85ರ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಯುವತಿ, ಮದುವೆಯ ಫೋಟೊಗಳು ವೈರಲ್