ದೆಹಲಿ: ನಗರದಲ್ಲಿ ಅಕ್ಕ-ತಂಗಿಯ ಹತ್ಯೆಯಾಗಿದೆ (Delhi Sisters Murder). ಪಿಂಕಿ (30) ಮತ್ತು ಜ್ಯೋತಿ (29) ಎಂಬುವರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ (2 Women Shot Dead In Delhi). ಈ ಹತ್ಯೆಯನ್ನು ಎಷ್ಟು ಜನ ಸೇರಿ ಮಾಡಿದ್ದಾರೆ ಎಂಬುದು ಇನ್ನೂ ನಿಖರವಾಗಿಲ್ಲ. ಮುಖ್ಯ ಆರೋಪಿ ಅರ್ಜುನ್ ಮತ್ತು ಆತನ ಸಹಚರ ಮೈಕೆಲ್ ಎಂಬುವನನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ದ್ವೇಷವೇ ಈ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಭಾನುವಾರ ಮುಂಜಾನೆ 4.40ರ ಹೊತ್ತಿಗೆ ದೆಹಲಿಯ ಆರ್ಕೆ ಪುರಂ ಪೊಲೀಸ್ ಠಾಣೆಯ ಕಂಟ್ರೋಲ್ ರೂಮಿಗೆ ಒಂದು ಕರೆ ಬಂದಿದೆ. ಹೀಗೆ ಕರೆ ಮಾಡಿದವರು, ‘ಅಂಬೇಡ್ಕರ್ ಬಸ್ತಿ ಏರಿಯಾದಲ್ಲಿ ಸೋದರಿಯರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಇವರು ಹೋಗುವಷ್ಟರಲ್ಲಿ ಮಹಿಳೆಯರು ಇಬ್ಬರೂ ರಕ್ತದ ಮಡುವಲ್ಲಿ ಬಿದ್ದಿದ್ದರು. ಪಿಂಕಿ-ಜ್ಯೋತಿಯನ್ನು ಎಸ್ಜೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಐಸಿಯುನಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ಜೀವ ಉಳಿದಿಲ್ಲ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ದೆಹಲಿ ನೈಋತ್ಯ ವಿಭಾಗದ ಡಿಸಿಪಿ, ಸಿ. ಮನೋಜ್, ‘ಆರೋಪಿಗಳಿಗೆ ಈ ಹುಡುಗಿಯರನ್ನು ಟಾರ್ಗೆಟ್ ಮಾಡುವ ಉದ್ದೇಶ ಮೊದಲು ಇರಲಿಲ್ಲ. ಇವರ ಸಹೋದರನೊಂದಿಗೆ ಏನೋ ಹಣಕಾಸಿನ ವ್ಯವಹಾರ ಇತ್ತು. ಯುವತಿಯರ ಸಹೋದರ ಮತ್ತು ಆರೋಪಿಗಳ ಮಧ್ಯೆ ಇದ್ದ ಸಂಘರ್ಷಕ್ಕೆ ಇವರಿಬ್ಬರ ಜೀವ ಬಲಿಯಾಗಿದೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಗೊತ್ತಾಗಿದೆ. ಕೇಸ್ನ ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.
‘ಕೇಂದ್ರದ ವಿರುದ್ಧ ಕೇಜ್ರಿವಾಲ್ ಕಿಡಿ’
ದೆಹಲಿಯ ಕಾನೂನು ವ್ಯವಸ್ಥೆ ಹೊಣೆ ಕೇಂದ್ರ ಸರ್ಕಾರದ್ದು. ಇಲ್ಲಿನ ಪೊಲೀಸ್ ಇಲಾಖೆ ಕೇಂದ್ರ ಗೃಹ ಇಲಾಖೆ ಅಡಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಇದೀಗ ದೆಹಲಿಯಲ್ಲಿ ಇಬ್ಬರು ಮಹಿಳೆಯರ ಹತ್ಯೆ ವಿಷಯ ಇಟ್ಟುಕೊಂಡು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ‘ದೆಹಲಿಯ ಜನರಿಗೆ ಅಭದ್ರತೆ ಕಾಡುತ್ತಿದೆ. ದೆಹಲಿಯ ಕಾನೂನು-ಸುವ್ಯವಸ್ಥೆ ಹೊಣೆ ಹೊತ್ತವರು, ಇಲ್ಲಿನ ಕಾನೂನು ವ್ಯವಸ್ಥೆಯನ್ನು ದೃಢಪಡಿಸುವ ಬದಲು, ದೆಹಲಿ ಸರ್ಕಾರವನ್ನು ಕಬಳಿಸಲು, ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿ ದೆಹಲಿ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಖಂಡಿತ ಇಲ್ಲಿನ ಜನರು ಸುರಕ್ಷಿತರಾಗಿ ಇರುತ್ತಾರೆ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ