ಹಾವನ್ನು ಹಿಡಿದು, ಅದರ ತಲೆಯನ್ನು ಕಚ್ಚಿದ್ದಲ್ಲದೆ, ಅದನ್ನು ರೆಕಾರ್ಡ್ ಮಾಡಿ ವಿಡಿಯೊ ಹರಿಬಿಟ್ಟ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿದ್ದು ತಮಿಳುನಾಡಿನ ರಾಣಿಪೇಟ್ನಲ್ಲಿ. ಭಯಾನಕ ವಿಡಿಯೊ ವೈರಲ್ ಆಗುತ್ತಿದ್ದಂತೆ, ಪರಿಸರ ಕಾರ್ಯಕರ್ತರು ವನ್ಯಜೀವಿ ಅಪರಾಧ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದಿದ್ದರು. ಮೋಹನ್, ಸೂರ್ಯ ಮತ್ತು ಸಂತೋಷ್ ಬಂಧಿತರು. ಇವರೆಲ್ಲರೂ ಕೈನೂರು ನಿವಾಸಿಗಳು ಎನ್ನಲಾಗಿದೆ. ಸುಖಾಸುಮ್ಮನೆ ಹಾವನ್ನು ಹಿಡಿದು, ಅದನ್ನು ಹಿಂಸಿಸಿದ್ದಾರೆ.
ಇದರಲ್ಲಿ ಮೋಹನ್ ಎಂಬಾತ ಕೈಯಲ್ಲಿ ಹಾವನ್ನು ಹಿಡಿದಿದ್ದಾನೆ. ಈ ಹಾವು ನನಗೆ ಕಚ್ಚಿದೆ, ಹಾಗಾಗಿ ನಾನು ಅದರ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಕೂಗುತ್ತಾನೆ. ಜತೆಗಿದ್ದ ಸೂರ್ಯ ಮತ್ತು ಸಂತೋಷ್ ನಗುತ್ತಿರುತ್ತಾರೆ. ‘ಬೇಡ ಬಿಡು..’ ಎಂದು ಮೋಹನ್ಗೆ ಅವರು ಹೇಳಿದರೂ, ಅದೇನೂ ತಡೆಯುವ ಸಲುವಾಗಿ ಅಲ್ಲ. ಅಷ್ಟಾದರೂ ಕೇಳದೆ ಮೋಹನ್ ಹಾವಿನ ತಲೆಗೆ ಬಲವಾಗಿ ಕಚ್ಚುತ್ತಾನೆ. ಆ ಹಾವಿನ ಮೈಯಿಂದ ರಕ್ತ ಸುರಿಯಲು ಶುರುವಾಗುತ್ತದೆ. ಆ ಹಾವು ಸತ್ತೇ ಹೋಗುತ್ತದೆ. ಅದನ್ನು ನೋಡಿ ಮೂವರೂ ಗಹಗಹಿಸಿ ನಗುವುದನ್ನು ವಿಡಿಯೊದಲ್ಲಿ ನೋಡಬಹುದು.
ಇದನ್ನೂ ಓದಿ: ಮಹಿಳೆಯ ಹಾಸಿಗೆಗೇ ಬಂತು 6 ಅಡಿ ಉದ್ದದ ವಿಷಕಾರಿ ಹಾವು; ಆರಾಮಾಗಿ ಮಲಗಿರುವ ಫೋಟೋ ವೈರಲ್
ಸದ್ಯ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಾಣಿ ಹಿಂಸೆ ಮತ್ತು ವನ್ಯಜೀವಿಯೊಂದನ್ನು ಕೊಂದ ಆರೋಪದಡಿ ಮೂವರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಈ ಹಿಂದೆ ಕೆಲವರು ಕುಡಿದ ಮತ್ತಿನಲ್ಲಿ ಹಾವಿಗೆ ಕಚ್ಚಿದ ಸುದ್ದಿಗಳನ್ನು ಓದಿದ್ದೇವೆ. ಆದರೆ ಈ ಮೂವರು ಕುಡಿದು ಹೀಗೆ ಮಾಡಿದ್ದಾರಾ, ಇಲ್ಲವಾ ಎಂಬುದಿನ್ನೂ ಸ್ಪಷ್ಟವಾಗಿಲ್ಲ.