ನವ ದೆಹಲಿ: ಕಾಮುಕರಿಗೆ ‘ಹೆಣ್ಣು’ ಸಿಕ್ಕರಾಯಿತು. ಅದು ಮಗುವಾಗಿರಲಿ, ಯುವತಿ/ಮಹಿಳೆ, ಕೊನೆಗೆ ವೃದ್ಧೆಯನ್ನೂ ಅವರು ಬಿಡದೆ ಅತ್ಯಾಚಾರ ಮಾಡುತ್ತಾರೆ. ಈ ರಾಕ್ಷಸೀಕೃತ್ಯಕ್ಕೆ ಕಡಿವಾಣವೇ ಇಲ್ಲ ಎಂಬಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಈಗ ಮತ್ತೊಂದು ಅತ್ಯಾಚಾರ ಪ್ರಕರಣಕ್ಕೆ ಸಾಕ್ಷಿಯಾಗಿದೆ. 5 ವರ್ಷದ ಪುಟ್ಟ ಹುಡುಗಿಯನ್ನು ಅಪಹರಿಸಿ, ಅತ್ಯಾಚಾರ ಮಾಡಲಾಗಿದೆ.
ಉತ್ತರ ದೆಹಲಿಯ ಭಲ್ಸ್ವಾ ಡೇರಿ ಬಳಿ ಡಿಸೆಂಬರ್ 21ರಂದು ಮಗು ಆಟವಾಡುತ್ತಿತ್ತು. ಕಾಮುಕನೊಬ್ಬ ಬಂದು ಅದನ್ನು ಎತ್ತಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ನಾಪತ್ತೆಯಾದ ಬಗ್ಗೆ ಬುಧವಾರವೇ ಅದರ ಪಾಲಕರು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮರುದಿನವೇ ಅಂದರೆ ಡಿ.22ರಂದು ಬೆಳಗ್ಗೆ ಈ ಮಗು ಅಲ್ಲಿಯೇ ಸಮೀಪದ ಪಾರ್ಕ್ ಬಳಿ, ಪೊಲೀಸ್ ಕಂಟ್ರೋಲ್ ರೂಮಿನ ವಾಹನದ ಸಿಬ್ಬಂದಿಗೆ ಸಿಕ್ಕಿದೆ. ಅದನ್ನು ಅವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಪರಿಶೀಲನೆ ನಡೆಸಿದ ವೈದ್ಯರು ಮಗುವಿನ ಮೇಲೆ ಅತ್ಯಾಚಾರ ಆಗಿದ್ದನ್ನು ದೃಢಪಡಿಸಿದ್ದಾರೆ. ಅದರ ಖಾಸಗಿ ಅಂಗಕ್ಕೆ ಗಾಯವಾಗಿದೆ ಎಂದು ಹೇಳಿದ್ದಾರೆ.
ಈ ಬಾಲಕಿಯ ಅಪ್ಪ-ಅಮ್ಮ ಇಬ್ಬರೂ ದಿನಗೂಲಿ ಕಾರ್ಮಿಕರು. ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆಗೆ ಬರುತ್ತಾರೆ. ಮಗು ಅಲ್ಲೇ ಅಕ್ಕಪಕ್ಕದ ಮನೆಯ ಮಕ್ಕಳೊಟ್ಟಿಗೆ ಆಟವಾಡಿಕೊಂಡು ಇರುತ್ತದೆ. ಡಿ.21ರಂದು ಕೂಡ ದಂಪತಿ ಕೆಲಸಕ್ಕೆ ಹೋಗಿದ್ದರು. ಮಗು ಪಕ್ಕದ ಮನೆ ಮಕ್ಕಳೊಂದಿಗೆ ಅಲ್ಲಿ ಡೇರಿ ಸಮೀಪ ಆಟವಾಡುತ್ತಿತ್ತು. ಮಧ್ಯಾಹ್ನ 2 ಗಂಟೆಗೇ ಅದು ಆಡಲು ಹೋಗಿದ್ದು, ರಾತ್ರಿ 8.30 ಆದರೂ ವಾಪಸ್ ಬಂದಿರಲಿಲ್ಲ. ಮೊದಲು ಅಕ್ಕ-ಪಕ್ಕದ ಮನೆಯವರನ್ನೆಲ್ಲ ಕೇಳಿದ ಪಾಲಕರು ನಂತರ ನಮಗೆ ದೂರು ಕೊಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದಾರೆ. ಹಾಗೇ, ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇನ್ನು ಕೇಸ್ಗೆ ಸಂಬಂಧಪಟ್ಟಂತೆ ವರದಿ ನೀಡುವಂತೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ಕೊಟ್ಟಿದೆ. ಪ್ರಕರಣದ ತನಿಖೆ ಯಾವ ಗತಿಯಲ್ಲಿದೆ? ಯಾರನ್ನಾದರೂ ಬಂಧಿಸಲಾಗಿದೆಯೇ? ವಿಚಾರಣೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿ, ಉತ್ತರ ಕೇಳಿದೆ.
ಇದನ್ನೂ ಓದಿ: Sexual harassment | ಪೋಷಕರ ಆರೈಕೆಗಾಗಿ ಕರೆಸಿಕೊಂಡ ಯುವತಿಯ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ