ತಿರುವನಂತಪುರಂ: ಕೇರಳದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (CPI(M)ದ ಮುಖಂಡನೊಬ್ಬನನ್ನು ಹತ್ಯೆ ಮಾಡಲಾಗಿದೆ. ಆರು ಜನರಿರುವ ಒಂದು ಗುಂಪು ಈ ಕೃತ್ಯ ಎಸಗಿದ್ದು ಗೊತ್ತಾಗಿದೆ. ಮೃತ ಮುಖಂಡನ ಹೆಸರು ಕೆ.ಶಾಜಹಾನ್ ಎಂದಾಗಿದ್ದು, ಸಿಪಿಐ (ಎಂ)ನ ಸ್ಥಳೀಯ ಸಮಿತಿ ಸದಸ್ಯ. ಇವರಿಗೆ ಇನ್ನೂ 40ವರ್ಷ ವಯಸ್ಸು. ಭಾನುವಾರ (ಆಗಸ್ಟ್ 14) ರಾತ್ರಿ 9.30ರ ಹೊತ್ತಿಗೆ ಕೇರಳದ ಪಲಕ್ಕಾಡ್ನ ಕೊಟ್ಟೆಕಾಡ್ ಎಂಬಲ್ಲಿ ಶಾಜಹಾನ್ಗೆ ಚಾಕುವಿನಿಂದ ಇರಿಯಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಶಾಜಹಾನ್ ಹತ್ಯೆಗೆ ಆರ್ಎಸ್ಎಸ್-ಬಿಜೆಪಿಯೇ ಕಾರಣ ಎಂದು ಸಿಪಿಐ(ಎಂ) ಆರೋಪಿಸಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಈಗಾಗಲೇ ಸಿಸಿಟಿವಿ ಫೂಟೇಜ್ಗಳನ್ನೆಲ್ಲ ಪಡೆದಿದ್ದೇವೆ ಎಂದು ಪಲಕ್ಕಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿಶ್ವನಾಥ್ ಹೇಳಿದ್ದಾರೆ. ಈ ಶಾಜಹಾನ್ ಸ್ವಾತಂತ್ರ್ಯೋತ್ಸವ ಆಚರಣೆಯ ಸಿದ್ಧತೆ ನಡೆಸುತ್ತಿದ್ದಾಗ ಅವರ ಮೇಲೆ ಗುಂಪಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿಯೂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
‘ಶಾಜಹಾನ್ ಹತ್ಯೆ ಮಾಡಿದವರು ಸಿಪಿಐ (ಎಂ)ನವರೇ ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸುತ್ತಿದ್ದಂತೆ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಇ.ಎನ್.ಸುರೇಶ್ ಬಾಬು ಪ್ರತಿಕ್ರಿಯೆ ನೀಡಿ, ‘ಈಗ ಹತ್ಯೆ ಕೇಸ್ನಲ್ಲಿ ಹೆಸರು ಕೇಳಿಬರುತ್ತಿರುವವರೆಲ್ಲ ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ಆದರೆ ಅವರು ಪಕ್ಷ ತೊರೆದು, ಬಿಜೆಪಿ ಸೇರಿ ತುಂಬ ದಿನ ಆಯಿತು’ ಎಂದಿದ್ದಾರೆ. ಇವರ ಈ ಆರೋಪಕ್ಕೆ ಉತ್ತರಿಸಿದ ಬಿಜೆಪಿ ನಾಯಕ ಸಿ. ಕೃಷ್ಣಕುಮಾರ್, ‘ಸಿಪಿಐ (ಎಂ)ನಲ್ಲಿನ ಆಂತರಿಕ ಕಚ್ಚಾಟದಿಂದಲೇ ಈ ಹತ್ಯೆ ಮಾಗಿದೆ. ಆದರೆ ಈಗ ಎಲ್ಲ ಆರೋಪವನ್ನೂ ಸಂಘ ಪರಿವಾರದ ಮೇಲೆ ಹಾಕಲಾಗುತ್ತಿದೆ. 2008ರಲ್ಲಿ ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ಅರುಚಾಮಿ ಹತ್ಯೆ ಆರೋಪಿಗಳಲ್ಲಿ ಒಬ್ಬನಾಗಿದ್ದ ಈಗ ಕೊಲೆಯಾದ ಶಾಜಹಾನ್ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Praveen Nettaru | ಕೊಲೆ ಆರೋಪಿಗಳಿಗೆ ಆಶ್ರಯ ಕೊಟ್ಟ ವ್ಯಕ್ತಿ ಕೇರಳದಲ್ಲಿ ಅರೆಸ್ಟ್, ಹಂತಕರ ಜತೆ ಸಂಪರ್ಕ