Site icon Vistara News

ಮದುವೆ ಮನೆಯಲ್ಲಿ ಕರೆಂಟ್ ಹೋದಾಗ ಆ್ಯಸಿಡ್​ನಂಥ ದ್ರವ ಎರಚಿದ ಅಪರಿಚಿತ; ವಧು-ವರ ಸೇರಿ 12 ಮಂದಿಗೆ ಸುಟ್ಟಗಾಯ

A Man Attacked with Acid Like Substance During wedding function in Chhattisgarh

#image_title

ಬಸ್ತಾರ್: ಸಂಭ್ರಮವೇ ತುಂಬಿದ್ದ ಮದುವೆ ಮನೆ ಅಪರಿಚಿತನೊಬ್ಬನಿಂದಾಗಿ ಕಣ್ಣೀರು, ಅಳು-ಗಾಬರಿ, ನೋವಿನ ಮನೆಯಾಗಿ ಬದಲಾದ ಘಟನೆ ಛತ್ತೀಸ್​ಗಢ್​​ನ ಬಸ್ತಾರ್​ ಜಿಲ್ಲೆಯ ಛೋಟೆ ಅಂಬಾಲಾ ಎಂಬ ಹಳ್ಳಿಯಲ್ಲಿ ನಡೆದಿದೆ. ಈ ಹಳ್ಳಿಯಲ್ಲಿ ದಮೃದ್ಧರ್ ಬಾಘೇಲ್​ (25) ಮತ್ತು ಸುನೀತಾ ಕಶ್ಯಪ್​ (19) ಮದುವೆ ಭರ್ಜರಿಯಾಗಿ ನಡೆಯುತ್ತಿತ್ತು. ಎಲ್ಲೆಲ್ಲೂ ಸಂಭ್ರಮ-ಮದುವೆ ಗಡಿಬಿಡಿ ಇತ್ತು. ಆದರೆ ಅಪರಿಚಿತನೊಬ್ಬ ಬಂದು ಏಕಾಏಕಿ ಒಂದು ದ್ರವವನ್ನು ಅಲ್ಲಿದ್ದವರ ಮೈಮೇಲೆಲ್ಲ ಎರಚಿದ್ದಾನೆ. ಅದು ಆ್ಯಸಿಡ್​ ಸ್ವರೂಪದ ದ್ರವವಾಗಿದ್ದು, ವಧು-ವರ ಮತ್ತು ಇತರ 10 ಮಂದಿಯ ಮೇಲೆ ಬಿದ್ದು, ಅವರೆಲ್ಲರ ಮೈಮೇಲೂ ಸುಟ್ಟಗಾಯಗಳಾಗಿವೆ.

ಸಂಜೆ ಹೊತ್ತಿಗೆ ಮಂಟಪದಲ್ಲಿ ವಧು-ವರರಿಗೆ ಏನೋ ಶಾಸ್ತ್ರ ಮಾಡಿಸಲಾಗುತ್ತಿತ್ತು. ಆಗ ಕರೆಂಟ್ ಹೋಗಿದೆ. ಕತ್ತಲಾಗುತ್ತಿದ್ದಂತೆ ಅಲ್ಲಿಯೇ ಇದ್ದ ಯಾರೋ ಒಬ್ಬಾತ ಒಂದು ದ್ರವವನ್ನು ವಧು-ವರನ ಮೇಲೆ ಹಾಕಿದ್ದಾನೆ. ಆ ವಧು-ವರನ ಅಕ್ಕಪಕ್ಕದಲ್ಲಿ ಇದ್ದವರ ಮೈಮೇಲೆ ಕೂಡ ಇದು ಬಿದ್ದಿದೆ. ಹೀಗೆ ಯಾರೆಲ್ಲರಿಗೆ ದ್ರವ ತಾಕಿದೆಯೋ, ಅವರೆಲ್ಲರಿಗೂ ಸುಡುವ ಸಂವೇದನೆಯಾಗಿದೆ. ಕೂಗಿಕೊಳ್ಳಲು ಪ್ರಾರಂಭಿಸಿದ್ದಾರೆ. ನೋವಿನಿಂದ ನರಳಲು ಶುರು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Acid Attacks In India |‌ 3 ವರ್ಷದಲ್ಲಿ ದೇಶಾದ್ಯಂತ 650 ಆ್ಯಸಿಡ್‌ ದಾಳಿ, ಬಂಗಾಳ ಅಗ್ರ, ಕರ್ನಾಟಕದ ಸ್ಥಾನ ಎಷ್ಟು?

ವಧು-ವರ ಸೇರಿ 12 ಮಂದಿ ಗಾಯಗೊಂಡಿದ್ದು, ಅವರಲ್ಲಿ 8 ಮಂದಿಯನ್ನು ಭಾನ್ಪುರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಧು-ವರ ಮತ್ತು ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಗ್ದಲ್​​ಪುರ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ನಾರಾಯಣಪುರ ಕಾಂಗ್ರೆಸ್ ಶಾಸಕ ಚಂದನ್ ಕಶ್ಯಪ್​ ಅವರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಘಟನೆ ನಡೆದಾಗ ಅವರೂ ಅಲ್ಲಿಯೇ ಇದ್ದರು. ಗಾಯಗೊಂಡ ಅನೇಕರನ್ನು ಅವರ ಬೆಂಗಾವಲು ವಾಹನದಲ್ಲಿ ಹಾಕಿಕೊಂಡು, ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಪ್ರಾರಂಭಿಸಿದ್ದಾರೆ.

Exit mobile version