ಪಾಟ್ನಾ: ಕೋಪದಲ್ಲಿ ಮೂಗು ಕೊಯ್ದುಕೊಂಡರೆ ಮರಳಿ ಬರೋದಿಲ್ಲ ಎಂಬ ಒಂದು ನಾಣ್ನುಡಿ ಇದೆ. ಅಂದರೆ ಕೋಪದ ಕೈಯಿಗೆ ಬುದ್ಧಿ ಕೊಟ್ಟು, ಆ ಕ್ಷಣದಲ್ಲಿ ಏನೇನೋ ನಿರ್ಧಾರ ತೆಗೆದುಕೊಂಡರೆ ಮತ್ತೆಂದೂ ಸರಿಪಡಿಸಲು ಸಾಧ್ಯವಾಗದ ಪ್ರಮಾದ ಆಗಿಬಿಡುತ್ತದೆ ಎಂಬುದನ್ನು ಅರ್ಥ ಮಾಡಿಸಲು ಈ ಮಾತನ್ನು ಹೇಳುತ್ತಾರೆ. ಆದರೆ ನೆನಪಿರಲಿ, ಕೋಪದಲ್ಲಿ ಮೂಗನ್ನಷ್ಟೇ ಅಲ್ಲ, ಯಾವುದೇ ಅಂಗವನ್ನು ಕೊಯ್ದುಕೊಂಡರೂ ಅದು ಮತ್ತೆ ಸಿಗುವುದಿಲ್ಲ..!
ಮತ್ತೇನಲ್ಲ, ಬಿಹಾರದಲ್ಲಿ 25 ವರ್ಷದ ಯುವಕನೊಬ್ಬ ಪತ್ನಿಯ ಮೇಲಿನ ಕೋಪಕ್ಕೆ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿ, ಬಿಸಾಡಿದ್ದಾನೆ. ಕೋಪದ ಕೈಯಲ್ಲಿ ಬುದ್ಧಿಕೊಟ್ಟು ಬಹುಮುಖ್ಯವಾದ ಅಂಗವನ್ನೇ ಕಳೆದುಕೊಂಡಿದ್ದಾನೆ. ಬಿಹಾರದ ಮಾದೇಪುರದಲ್ಲಿರುವ ರಜನಿ ನಯಾನಗರದ ನಿವಾಸಿಯಾದ ಕೃಷ್ಣಾ ಬಾಸುಕಿ (25) ಹೀಗೊಂದು ಅವಸರದ ನಿರ್ಧಾರ ಮಾಡಿಬಿಟ್ಟಿದ್ದಾನೆ. ತವರಿಗೆ ಹೋಗಿ ಕುಳಿತಿದ್ದ ಪತ್ನಿ ವಾಪಸ್ ಬರಲು ತಡ ಮಾಡಿದಳು. ಕರೆದಾಕ್ಷಣ ಬರಲಿಲ್ಲ ಎಂಬ ಕಾರಣಕ್ಕೆ ತನ್ನ ಖಾಸಗಿ ಅಂಗಕ್ಕೆ ಕತ್ತರಿ ಹಾಕಿಕೊಂಡಿದ್ದಾನೆ.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿ, ಖಾಸಗಿ ಅಂಗ ಪ್ರದರ್ಶಿಸಿದ ಪ್ರಯಾಣಿಕ; ಏರ್ ಇಂಡಿಯಾ ಪ್ಲೈಟ್ನಲ್ಲಿ ಅಸಹ್ಯ ಘಟನೆ!
ಕೃಷ್ಣ ಬಾಸುಕಿ, ಅನಿತಾ ಎಂಬಾಕೆಯನ್ನು ಮದುವೆಯಾಗಿ ಈ ದಂಪತಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಪುತ್ರ ಸೇರಿ ನಾಲ್ವರು ಮಕ್ಕಳಿದ್ದಾರೆ. ಕೃಷ್ಣ ಬಾಸುಕಿ ಪಂಜಾಬ್ನ ಮಂಡಿಯಲ್ಲಿ ಕೆಲಸ ಮಾಡುತ್ತಾನೆ. ಆತ ಅಲ್ಲಿಯೇ ವಾಸವಾಗಿದ್ದು ಆಗಾಗ ಬಂದು ಪತ್ನಿ-ಮಕ್ಕಳ ಜತೆ ಸಮಯ ಕಳೆದು ಹೋಗುತ್ತಿದ್ದ. ಈಗೊಂದು ಎರಡು ತಿಂಗಳ ಹಿಂದೆ ರಜನಿ ನಯಾನಗರದಲ್ಲಿರುವ ತನ್ನ ಮನೆಗೆ ಬಂದಿದ್ದ. ಆದರೆ ಪತ್ನಿ ಅನಿತಾ ತವರು ಮನೆಗೆ ಹೋಗಿದ್ದಳು. ಮರಳಿ ಬರುವಂತೆ ಈತ ಕರೆದಿದ್ದ. ಆದರೆ ಆಕೆ ನೆಪ ಹೇಳುತ್ತ ವಿಳಂಬ ಮಾಡುತ್ತಲೇ ಹೋಗಿದ್ದಳು. ಇದರಿಂದ ತೀವ್ರ ಹತಾಶನಾದ ಕೃಷ್ಣ ಕೆಟ್ಟ ನಿರ್ಧಾರ ಮಾಡಿದ್ದಾನೆ.
ಖಾಸಗಿ ಅಂಗ ಕತ್ತರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ನೆರೆಹೊರೆಯವರೇ ಮಾದೇಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯ ಸುಕೇಶ್ ಕುಮಾರ್ ಹೇಳಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು: http://vistaranews.com/attribute-category/crime/