ದೆಹಲಿಯಲ್ಲಿ ಯುವಕನೊಬ್ಬ 5 ವರ್ಷದ ಮಗುವನ್ನು ಒಂದು ವಿಚಿತ್ರ ಕಾರಣಕ್ಕೆ ಅಪಹರಣ ಮಾಡಿ, ಸಿಕ್ಕಿಬಿದ್ದಿದ್ದಾನೆ. ಸಾಮಾನ್ಯವಾಗಿ ಪಾಲಕರ ಮೇಲಿನ ದ್ವೇಷಕ್ಕೋ, ಹಣಕ್ಕಾಗಿಯೋ ಮಕ್ಕಳನ್ನು ಕಿಡ್ನ್ಯಾಪ್ ಮಾಡುವ ಕ್ರಿಮಿನಲ್ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಪುಟ್ಟ ಮಕ್ಕಳನ್ನು ಅಪಹರಿಸಿ, ಅತ್ಯಾಚಾರ ಮಾಡುವ ಅಮಾನುಷ ಕೃತ್ಯವೂ ಅದೆಷ್ಟೋ ವರದಿಯಾಗುತ್ತದೆ. ಆದರೆ ಈ ಯುವಕ ಅದ್ಯಾವುದೇ ಕಾರಣಕ್ಕೂ ಮಗುವನ್ನು ಅಪಹರಿಸಿರಲಿಲ್ಲ. ಆತನ ಉದ್ದೇಶ ಕೇಳಿ, ಪೊಲೀಸರೇ ಕಂಗಾಲಾಗಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿ ಸಿಕ್ಕಿದ್ದು, ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಯುವಕನ ಹೆಸರು ನೀರಜ್. 21 ವರ್ಷದ ಈ ಹುಡುಗ ತನ್ನ 33 ವರ್ಷದ ಚಿಕ್ಕಪ್ಪನಿಗಾಗಿ 5 ವರ್ಷದ ಹುಡುಗನನ್ನು ಅಪಹರಣ ಮಾಡಿದ್ದ. ದೆಹಲಿಯಿಂದ ಮಗುವನ್ನು ಕರೆದುಕೊಂಡು ಹೋಗಿ ಉತ್ತರ ಪ್ರದೇಶದ ಅಲಿಗಢ್ನಲ್ಲಿರುವ ತನ್ನ ಚಿಕ್ಕಪ್ಪನಿಗೆ ಒಪ್ಪಿಸಿದ್ದ. ಇವರ್ಯಾರೂ ಮಗುವಿಗೆ ಸ್ವಲ್ಪವೂ ಹಾನಿ ಮಾಡಿರಲಿಲ್ಲ. ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು..!
ಯಾಕೆ ಕಿಡ್ನ್ಯಾಪ್?
ದೆಹಲಿಯ ಗೌತಮಪುರಿಯ ಈ ಮಗು ಜನವರಿ 1ರಂದು ಮನೆಯೆದುರು ಆಟವಾಡುತ್ತಿತ್ತು. ಅಂದೇ ನಾಪತ್ತೆಯಾಗಿತ್ತು. ಎರಡು ದಿನ ಎಲ್ಲ ಕಡೆ ಹುಡುಕಿದ ಅದರ ಅಪ್ಪ, ಇನ್ನು ಸಾಧ್ಯವಿಲ್ಲ ಎಂದು ಬಾದರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಬಾಲಕನ ಪತ್ತೆ ಕಾರ್ಯ ಪ್ರಾರಂಭಿಸಿದರು. ಯಾರ ಮೇಲಾದರೂ ಅನುಮಾನವಿದೆಯಾ ಎಂದು ಕೇಳಿದ್ದಕ್ಕೆ, ಬಾಲಕನ ಕುಟುಂಬದವರು ಇಲ್ಲ ಎಂದುಬಿಟ್ಟರು. ಆದರೂ ತನಿಖೆಯ ಭಾಗವಾಗಿ ಅವರ ಬಂಧುಗಳು, ಸಂಬಂಧಿಕರು, ಸ್ನೇಹಿತರು, ಕುಟುಂಬದವರನ್ನೆಲ್ಲ ಪೊಲೀಸರು ವಿಚಾರಣೆ ನಡೆಸಿದರು. ಸುತ್ತಲಿನ ಸಿಸಿಟಿವಿ ಫೂಟೇಜ್ಗಳನ್ನೂ ಪರಿಶೀಲನೆ ಮಾಡಿದರು. ಇಷ್ಟಾದರೂ ಒಂದೇ ಒಂದು ಸುಳಿವು ಸಿಗಲಿಲ್ಲ.
ಅದಾದ ಮೇಲೆ ನೆರೆಹೊರೆಯವರನ್ನು ವಿಚಾರಣೆಗೆ ಒಳಪಡಿಸಲು ಪ್ರಾರಂಭಿಸಿದರು. ಆಗ ಪಕ್ಕದ ಮನೆ ಹುಡುಗ ನೀರಜ್ ಕೂಡ ಜನವರಿ 1ರಿಂದ ಕಾಣುತ್ತಿಲ್ಲ ಎಂಬ ವಿಷಯ ಬೆಳಕಿಗೆ ಬಂತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಅವನು ದೆಹಲಿ ಬಿಟ್ಟು ಹೋಗಿದ್ದು ಗೊತ್ತಾಯಿತು. ಬಳಿಕ ಪೊಲೀಸರು ಅವನನ್ನು ಟ್ರೇಸ್ ಮಾಡಿದ್ದಾರೆ. ಆತನನ್ನು ಹಿಡಿದು ವಿಚಾರಿಸಿದಾಗ ಅವನು ಮೊದಲು ಒಪ್ಪಿಕೊಳ್ಳಲಿಲ್ಲ. ಆದರೆ ನಂತರ ತಾನೇ ಕಿಡ್ನ್ಯಾಪ್ ಮಾಡಿದ್ದಾಗಿ ಹೇಳಿದ್ದಾನೆ ಮತ್ತು ಮಗುವನ್ನು ಉತ್ತರ ಪ್ರದೇಶದ ಅಲಿಗಢ್ನ ಜಿರಲ್ವಿ ಎಂಬ ಹಳ್ಳಿಯಲ್ಲಿ ಚಿಕ್ಕಪ್ಪ ಸುನೀತ್ ಬಾಬು ಮನೆಯಲ್ಲಿ ಇಟ್ಟಿದ್ದಾಗಿಯೂ ತಿಳಿಸಿದ್ದಾನೆ.
ಅಪಹರಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ನೀರಜ್ ಕೊಟ್ಟ ಕಾರಣ ತೀರ ವಿಚಿತ್ರ ಅನ್ನಿಸುತ್ತಿದೆ. ‘ನನ್ನ ಚಿಕ್ಕಪ್ಪನಿಗೆ ಮಕ್ಕಳಿಲ್ಲ. ಚಿಕ್ಕಮ್ಮ ಈಗಾಗಲೇ ನಾಲ್ಕು ಬಾರಿ ಗರ್ಭಿಣಿಯಾದರು. ಪ್ರತಿಬಾರಿಯೂ ಗಂಡು ಮಕ್ಕಳೇ ಹುಟ್ಟಿ, ಹೆರಿಗೆಯಾಗುತ್ತಿದ್ದಂತೆ ಆ ಮಕ್ಕಳು ಸತ್ತು ಹೋಗಿದ್ದಾರೆ. ಹಾಗಾಗಿ ನನ್ನ ಚಿಕ್ಕಪ್ಪ-ಚಿಕ್ಕಮ್ಮಂಗೆ ನಾನೊಂದು ಗಂಡು ಮಗುವನ್ನು ಉಡುಗೊರೆ ಕೊಡಲು ನಿರ್ಧರಿಸಿ, ಈ ಮಗುವನ್ನು ಅಪಹರಿಸಿದೆ’ ಎಂದು ತಿಳಿಸಿದ್ದಾನೆ. ಆ ಮಗುವಿಗೆ ವೈದ್ಯಕೀಯ ತಪಾಸಣೆ ಮಾಡಿ ಪಾಲಕರಿಗೆ ಒಪ್ಪಿಸಲಾಗಿದೆ. ನೀರಜ್ ಪೊಲಿಸ್ ಕಸ್ಟಡಿಯಲ್ಲಿ ಇದ್ದಾನೆ.
ಇದನ್ನೂ ಓದಿ: Woman kidnap | ವಿವಾಹಿತೆ ಕಿಡ್‌ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್, ಪ್ರಿಯಕರನಿಂದಲೇ ಅಪಹರಣ !