ನವ ದೆಹಲಿ: ಪತಿ-ಪತ್ನಿ ಜಗಳದಲ್ಲಿ ಕೂಸು ಬಡವಾಯ್ತು ಎಂಬುದೊಂದು ಮಾತಿದೆ. ಆದರೆ ಇಲ್ಲಿ ಈ 2 ವರ್ಷದ ಕೂಸು ತನ್ನ ಅಪ್ಪ-ಅಮ್ಮನ ಜಗಳದ ಮಧ್ಯೆ ಪ್ರಾಣಾಪಾಯಕ್ಕೀಡಾಗಿದೆ. ದೆಹಲಿಯ ಕಲ್ಕಾಜಿ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ವಿಪರೀತ ಜಗಳವಾಡಿದ ನಂತರ ತಮ್ಮ 2ವರ್ಷದ ಮಗನನ್ನು ಕಟ್ಟಡದ ಮೂರನೇ ಅಂತಸ್ತಿನಿಂದ ಕೆಳಗೆ ಎಸೆದಿದ್ದಾನೆ. ಅಷ್ಟೇ ಅಲ್ಲ ಬಳಿಕ ತಾನೂ ಕೆಳಗೆ ಹಾರಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಅಪ್ಪ-ಮಗ ಇಬ್ಬರನ್ನೂ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮನ್ಸಿಂಗ್ ಮತ್ತು ಅವನ ಪತ್ನಿ ಪೂಜಾ ನಡುವೆ ಇತ್ತೀಚೆಗೆ ಸದಾ ಜಗಳ ನಡೆಯುತ್ತಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು. ಕಳೆದ ಕೆಲವು ತಿಂಗಳುಗಳ ಈಚೆಗೆ ಇಬ್ಬರೂ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಪೂಜಾ, ಕಲ್ಕಾಜಿಯಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ, ಇಬ್ಬರು ಮಕ್ಕಳೊಂದಿಗೆ ಇದ್ದಳು. ಡಿ.16ರಂದು ರಾತ್ರಿ ಮನ್ಸಿಂಗ್ ಇಲ್ಲಿಗೆ ಬಂದಿದ್ದಾನೆ. ಪತ್ನಿ ಪೂಜಾಳ ಭೇಟಿಗೆ ಬಂದವನೇ ಜಗಳ ತೆಗೆದಿದ್ದಾನೆ. ಇವರಿಬ್ಬರ ಮಧ್ಯೆ ದೊಡ್ಡ ಗಲಾಟೆಯೇ ನಡೆದಿದೆ. ತಾರಕಕ್ಕೇರಿದ ಜಗಳ ನಡುವೆ ತಲೆಕೆಟ್ಟವನಂತೆ ಆಡಿದ ಮನ್ಸಿಂಗ್ ಅಲ್ಲಿಯೇ ಇದ್ದ ತನ್ನ 2ವರ್ಷದ ಮಗುವನ್ನು ಎತ್ತಿ, ಬಾಲ್ಕಿನಿಯಿಂದ ಎಸೆದಿದ್ದಾನೆ. ಭಯದಲ್ಲಿ ಮಗು ದೊಡ್ಡದಾಗಿ ಅಳುತ್ತಿತ್ತು. ಇತ್ತ ಮನ್ಸಿಂಗ್ಗೆ ತಾನೇನು ಮಾಡುತ್ತಿದ್ದೇನೆ ಎಂಬ ಅರಿವೂ ಇರಲಿಲ್ಲ. ಸುಮಾರು 21 ಅಡಿ ಆಳದ ಸಿಮೆಂಟ್ ನೆಲಕ್ಕೆ ಮಗು ಬಿದ್ದು ಗಂಭೀರ ಗಾಯಗೊಂಡಿದೆ. ಹೀಗೆ ಮಗುವನ್ನು ಎಸೆದ ಬಳಿಕ ಮನ್ಸಿಂಗ್ ತಾನೂ ಅಲ್ಲಿಂದ ಹಾರಿಬಿದ್ದಿದ್ದಾನೆ.
ಪೊಲೀಸರ ಎದುರು ಹೇಳಿಕೆ ಕೊಟ್ಟ ಪೂಜಾಳ ಅಜ್ಜಿ, ‘ಮನ್ ಸಿಂಗ್ ತನ್ನ ಮನೆಗೆ ಬಂದಾಗ ಮದ್ಯಪಾನ ಮಾಡಿದ್ದ. ಬಂದು ತುಂಬಾ ಗಲಾಟೆ ಮಾಡಿದ್ದಾನೆ’ ಎಂದಿದ್ದಾರೆ. ಇದೀಗ ಪೊಲೀಸರು ಮನ್ ಸಿಂಗ್ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಬೆಚ್ಚಿ ಬೀಳಿಸಿದ ದೆಹಲಿ ಅಪರಾಧ