ಲಖನೌ: ಮನೆ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದವರೇ ಆಕೆಯನ್ನು ನಿರಂತರವಾಗಿ ಅತ್ಯಚಾರ ಮಾಡಿದ ಹೇಯ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿದ್ದ ಹುಡುಗಿಯ ಮೇಲೆ ಬೇರೆಯವರು ಕಣ್ಣಿಡದಂತೆ ಆಕೆಯ ಅಪ್ಪ, ಅಜ್ಜ, ಚಿಕ್ಕಪ್ಪ ರಕ್ಷಣೆ ಮಾಡಬೇಕಿತ್ತು. ಆದರೆ ಈ ಮೂರೂ ಜನ ಅವಳ ಮೇಲೆ ರೇಪ್ ಮಾಡಿದ್ದಾರೆ. ಈ ಬಗ್ಗೆ ಆಕೆಯೇ ದೂರು ನೀಡಿದ್ದು, ಸದ್ಯ ಅವಳ ತಂದೆ ಅರೆಸ್ಟ್ ಆಗಿದ್ದಾನೆ.
ಸದ್ಯ ಪುಣೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 17 ವರ್ಷದ ಹುಡುಗಿ, ವಿಶಾಖಾ ಕಮಿಟಿ ಎದುರು ತಾನು ಅನುಭವಿಸಿದ ಪಾಡನ್ನು ಹೇಳಿಕೊಂಡಿದ್ದಾಳೆ. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ. (ವಿಶಾಖಾ ಕಮಿಟಿ ಎಂದರೆ, ಲೈಂಗಿಕ ದೌರ್ಜನ್ಯದ ವಿರುದ್ಧ ಇರುವ ಕ್ರಮದ ಮಾರ್ಗಸೂಚಿಗಳ ಬಗ್ಗೆ ಸಂತ್ರಸ್ತರಿಗೆ ಅರಿವು ಮೂಡಿಸುವ ಸಮಿತಿ. ಇದು ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ರೂಪಿಸಲ್ಪಟ್ಟಿದೆ. ಸಂತ್ರಸ್ತರಿಗೆ ಕಾನೂನು ಹೋರಾಟದ ನೆರವು ನೀಡುತ್ತಿದೆ. ಮೊಟ್ಟಮೊದಲು 1997ರಲ್ಲಿ ಸುಪ್ರೀಂಕೋರ್ಟ್ನಿಂದ ಈ ಸಮಿತಿ ಘೋಷಿಸಲ್ಪಟ್ಟಿದೆ.)
‘ನಾನು 2016ರಿಂದ 2018ರವರೆಗೆ ಉತ್ತರ ಪ್ರದೇಶದ ನನ್ನ ಮನೆಯಲ್ಲಿ ಇದ್ದೆ. ಆಗ ನನ್ನ ಚಿಕ್ಕಪ್ಪ ಮತ್ತು ಅಜ್ಜನಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದೆ. ನನ್ನ ಮೇಲೆ ಅತ್ಯಾಚಾರ ಎಸಗಿದರು. 2018ರಲ್ಲಿ ಪುಣೆಗೆ ಬಂದೆ. ಇಲ್ಲಿ ನನ್ನ ಅಪ್ಪನ ಬಳಿ ನನ್ನ ಮೇಲಾದ ದೌರ್ಜನ್ಯ ಹೇಳಿಕೊಂಡೆ. ಅದೂ ನೇರವಾಗಿ ಹೇಳಲಾಗದೆ, ಒಂದು ಚೀಟಿಯಲ್ಲಿ ಬರೆದುಕೊಟ್ಟೆ. ಆ ನನ್ನ ಅಪ್ಪನೂ ಅದನ್ನೇ ಮಾಡಿದ. ನನ್ನ ಮೇಲೆ ರೇಪ್ ಮಾಡಿದ ಚಿಕ್ಕಪ್ಪ, ಅಜ್ಜನ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ನನ್ನ ಅಮ್ಮ ಇಲ್ಲದಾಗಲೆಲ್ಲ ನನ್ನ ಮೇಲೆ ರೇಪ್ ಮಾಡಿದ’ ಎಂದು ಹುಡುಗಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಸದ್ಯ ಪುಣೆಯಲ್ಲಿಯೇ ಇದ್ದ ಅಪ್ಪನನ್ನು ಬಂಧಿಸಲಾಗಿದೆ. ಮೂರೂ ಮಂದಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Danushka Gunathilaka | ಅತ್ಯಾಚಾರ ಆರೋಪಿ ದನುಷ್ಕ ಗುಣತಿಲಕಗೆ ಷರತ್ತುಬದ್ಧ ಜಾಮೀನು