40 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ಮಹಿಳೆಯನ್ನು ಕೊಂದು (Woman Killed), ಆಕೆಯ ಹೆಣ ಸಾಗಿಸಲು ಪ್ರಯತ್ನಿಸಿದವರ ಯೋಜನೆಯನ್ನು ಓಲಾ ಕ್ಯಾಬ್ ಡ್ರೈವರ್ ವಿಫಲಗೊಳಿಸಿದ್ದಾನೆ. ಡ್ರೈವರ್ ಕೊಟ್ಟ ಮಾಹಿತಿ ಅನ್ವಯ ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಮೂವರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ಕುಸುಮ್ ಕುಮಾರಿಯನ್ನು, ಆಕೆಯ ಮೈದುನ ಸೌರಭ್ ಮತ್ತು ಇನ್ನೊಬ್ಬ ಸಂಬಂಧಿ ಸೇರಿ ಮಹಾರಾಜ್ಪುರದಲ್ಲಿ ಕೊಂದಿದ್ದಾರೆ. ಇವರ ಮಧ್ಯೆ ಮೊದಲಿನಿಂದಲೂ ಆಸ್ತಿ ಕಲಹ ಇತ್ತು. ಆಕೆಯ ಹೆಸರಲ್ಲಿ ಇದ್ದ ಕೋಟ್ಯಂತರ ರೂಪಾಯಿ ಆಸ್ತಿ ಕಬಳಿಸಲು ಮೈದುನ ಪ್ರಯತ್ನ ಮಾಡುತ್ತಲೇ ಇದ್ದ. ಆಕೆ ಒಪ್ಪದ ಕಾರಣಕ್ಕೆ ಹತ್ಯೆ ಮಾಡಿದ್ದರು. ಕುಸುಮ್ ಕುಮಾರಿಯನ್ನು ಕೊಂದ ಬಳಿಕ ಆಕೆಯ ದೇಹವನ್ನು ಗುಟ್ಟಾಗಿ ಸಾಗಿಸಿ, ಎಸೆಯಲು ಪ್ರಯತ್ನ ಪಟ್ಟರು. ಆದರೆ ಅವರ ಪ್ರಯತ್ನವನ್ನು ಓಲಾ ಕ್ಯಾಬ್ ಡ್ರೈವರ್ ವಿಫಲಗೊಳಿಸಿದ್ದಾನೆ.
ಕುಸುಮ್ ಕುಮಾರಿಯನ್ನು ಕಾನ್ಪುರದಿಂದ ಮಹಾರಾಜ್ಪುರಕ್ಕೆ ಕರೆತಂದು ಕೊಂದ ನಂತರ, ಮತ್ತೆ ವಾಪಸ್ ಕಾನ್ಪುರಕ್ಕೆ ಹೋಗಲು ಸೌರಭ್ ಮತ್ತು ಅವನ ಸಹಚರ ನೊಯ್ಡಾದಿಂದ ಒಂದು ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಕ್ಯಾಬ್ ಡ್ರೈವರ್ ಮನೋಜ್ ಸ್ಥಳಕ್ಕೆ ಹೋಗಿ ಕಾರು ನಿಲ್ಲಿಸಿದಾಗ ಸೌರಭ್ ಮತ್ತು ಸಹಚರ ಸೇರಿ ಎರಡು ದೊಡ್ಡ ಗೋಣಿಚೀಲವನ್ನು ಡಿಕ್ಕಿಯಲ್ಲಿ ಹಾಕಲು ಮುಂದಾದರು. ಅದನ್ನು ಚಾಲಕ ನೋಡಿದ. ಒಂದು ಗೋಣಿಚೀಲದ ಮೇಲೆ ರಕ್ತದ ಕಲೆ ಹಸಿಯಾಗಿತ್ತು. ಅಷ್ಟೇ ಅಲ್ಲ, ಒಳಗೆ ಏನೋ ಇರುವುದು ಗೊತ್ತಾಗುತ್ತಿತ್ತು. ಕೂಡಲೇ ಡ್ರೈವರ್ ರೈಡ್ ಕ್ಯಾನ್ಸಲ್ ಮಾಡಿಕೊಂಡ. ನೊಯ್ಡಾದಿಂದ ಕಾನ್ಪುರಕ್ಕೆ ಬರಲು ಒಪ್ಪದ ಕ್ಯಾಬ್ ಡ್ರೈವರ್ಗೆ ಸೌರಭ್ ಸಿಕ್ಕಾಪಟೆ ಬೈದ. ಆದರೂ ತಲೆಕೆಡಿಸಿಕೊಳ್ಳದೆ ಚಾಲಕ ಅಲ್ಲಿಂದ ಹೋದ.
ಇದನ್ನೂ ಓದಿ: Murder Case: ದೇವಸ್ಥಾನದಲ್ಲಿ ಹೆಂಡತಿ ಕಣ್ಣೆದುರಲ್ಲೇ ಗಂಡನ ಬರ್ಬರ ಹತ್ಯೆ: ಅಮಾವಾಸ್ಯೆ ದಿನ ಹರಿದ ನೆತ್ತರು
ಹೆದ್ದಾರಿಯಲ್ಲಿ ಹೊರಟ ಕ್ಯಾಬ್ ಚಾಲಕ ಗಸ್ತುಪೊಲೀಸರಿಗೆ ವಿಷಯ ತಿಳಿಸಿದ. ಅಷ್ಟಲ್ಲದೆ, ಮಹಾರಾಜಪುರ ಠಾಣೆ ಪೊಲೀಸರಿಗೂ ಮಾಹಿತಿ ಕೊಟ್ಟ. ಹಂತಕರು ಇಬ್ಬರೂ ಇರುವ ಸ್ಥಳವನ್ನೂ ಹೇಳಿದ. ಕೂಡಲೇ ಅಲ್ಲಿಗೆ ಧಾವಿಸಿದ ಪೊಲೀಸರು ಸೌರಭ್ ಮತ್ತು ಅವನ ಸಚಹರನನ್ನು ಬಂಧಿಸಿದ್ದಾರೆ. ಇವರಿಬ್ಬರೂ ಕೊಟ್ಟ ಮಾಹಿತಿ ಅನ್ವಯ, ಕೊಲೆಯಲ್ಲಿ ಸಹಾಯ ಮಾಡಿದ ಇನ್ನೊಬ್ಬಾತನನ್ನೂ ಬಂಧಿಸಲಾಗಿದೆ. ಕೇಸ್ನ ತನಿಖೆ ನಡೆಸುತ್ತಿದ್ದಾರೆ.