ದೆಹಲಿಯಲ್ಲಿ ಕಾರಿನಡಿ ಆಗಿ ಭಯಾನಕವಾಗಿ ಎಳೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಯುವತಿ ಕೇಸ್ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಆಕೆ ಮೇಲೆ ಅತ್ಯಾಚಾರ ಆಗಿರಬಹುದು ಎಂಬ ಅನುಮಾನವನ್ನು ಆಮ್ ಆದ್ಮಿ ಪಕ್ಷ ವ್ಯಕ್ತಪಡಿಸಿದೆ. ಇದೊಂದು ಅತ್ಯಂತ ಅಪರೂಪದ ಕ್ರೈಂ ಕೇಸ್ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇನ್ನು ಈ ಕೇಸ್ನಲ್ಲಿ ಬಿಜೆಪಿ ಮುಖಂಡ ಅಮಿತ್ ಮಿತ್ತಲ್ ಸೇರಿ ಐವರು ಅರೆಸ್ಟ್ ಆಗುತ್ತಿದ್ದಂತೆ, ಆಮ್ ಆದ್ಮಿ ಪಕ್ಷ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದೆ.
ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ, ಕಾನೂನು ಸುವ್ಯವಸ್ಥೆ ನೇರವಾಗಿ ಕೇಂದ್ರ ಸರ್ಕಾರದಡಿ ಬರುತ್ತದೆ. ಲೆಫ್ಟಿನೆಂಟ್ ಗವರ್ನರ್ ನಿಯಂತ್ರಣಕ್ಕೆ ಒಳಪಡುತ್ತದೆ. ಅದನ್ನೇ ಈಗ ಆಮ್ ಆದ್ಮಿ ಪಕ್ಷ ಅಸ್ತ್ರವನ್ನಾಗಿಸಿಕೊಂಡಿದೆ. ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತ ಆಪ್ ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ. ಇವರೆಲ್ಲ ಲೆಫ್ಟಿನೆಂಟ್ ಗವರ್ನರ್ ನಿವಾಸದ ಎದುರು ಸೇರಿ ಹೋರಾಟ ನಡೆಸಿದ್ದಾರೆ.
ಜನವರಿ 1ರಂದು ದೆಹಲಿಯ ಸುಲ್ತಾನ್ಪುರಿಯಲ್ಲಿ ಈ ದುರ್ಘಟನೆ ನಡೆದಿತ್ತು. ಯುವತಿಯ ಸ್ಕೂಟರ್ಗೆ ಕಾರು ಡಿಕ್ಕಿಯಾಗಿ ಆಕೆ ಕೆಳಗೆ ಬಿದ್ದಿದ್ದಳು. ಚಾಲಕ ಅದೆಷ್ಟು ನಿರ್ಲಕ್ಷ್ಯ ವಹಿಸಿದ್ದ ಎಂದರೆ, ಬಿದ್ದವಳು ಏನಾದಳು ಎಂಬುದನ್ನು ನೋಡದೆ ಆತ ಕಾರು ಚಲಾಯಿಸಿಕೊಂಡು ಹೋಗಿದ್ದ. ಆ ಹುಡುಗಿ ಕಾರಿನಡಿಯಲ್ಲಿ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಬಳಿಕ ನಗ್ನಾವಸ್ಥೆಯಲ್ಲಿ ರಸ್ತೆ ಮಧ್ಯೆ ಬಿದ್ದಿದ್ದಳು. ಕಾರು ಯೂಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ನಡೆದ ದುರ್ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Accident in Delhi | ಯುವತಿಯ ದೇಹವನ್ನು ಎಳೆದುಕೊಂಡೇ ಹೋದ ಕಾರು, ಸಿಸಿಟಿವಿಯಲ್ಲಿ ದೃಶ್ಯ ಸೆರೆ