Site icon Vistara News

Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Accident Case

ಯಾದಗಿರಿ/ವಿಜಯಪುರ: ಭಾರಿ ಮಳೆಗೆ ವಿದ್ಯುತ್‌ ಕಂಬ ಮುರಿದು (Accident Case) ಬಿದ್ದಿತ್ತು. ಕಂಬ ಜೋಡಣೆ ಮಾಡುವಾಗ ಎಡವಟ್ಟಾಗಿದ್ದು, ಕಂಬ ಏರಿ ರಿಪೇರಿ ಕೆಲಸ ಮಾಡುವಾಗ ಕಾರ್ಮಿಕನಿಗೆ ದಿಢೀರ್‌ ವಿದ್ಯುತ್ ಪ್ರವಹಿಸಿ ಒದ್ದಾಡಿದ್ದಾನೆ. ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಕಾರ್ಮಿಕ ರಾಯಪ್ಪ ಎಂಬಾತನನ್ನು ಸ್ಥಳೀಯರು ರಕ್ಷಿಸಿ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಲೈನ್ ಬಂದ್ ಮಾಡಿ ಕೆಲಸ ಮಾಡುತ್ತಿದ್ದಾಗ ಏಕಾಎಕಿ ವಿದ್ಯುತ್‌ ಹರಿದಿದೆ. ಕಾರ್ಮಿಕ ರಾಯಪ್ಪ ನಿಯಂತ್ರಣ ತಪ್ಪಿದ್ದು ಕಂಬದಲ್ಲಿ ನೇತಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ನಂತರ ವಿದ್ಯುತ್ ಬಂದ್ ಮಾಡಿಸಿ ಸ್ಥಳೀಯರೇ ವಿದ್ಯುತ್‌ ಕಂಬ ಏರಿ ಕಾರ್ಮಿಕನ‌ನ್ನು ರಕ್ಷಣೆ ಮಾಡಿದ್ದಾರೆ. ಕೆಂಭಾವಿ ವಿಭಾಗದ ಜೆಸ್ಕಾಂ ‌ಸಿಬ್ಬಂದಿ ಬೇಜವಾಬ್ದಾರಿತನ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್‌; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು

ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾಕ್ಕೆ ಇಬ್ಬರು ಬಲಿ

ವಿಜಯಪುರ ಜಿಲ್ಲೆಯ ತಿಕೋಟ ಬಳಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತದಲ್ಲಿ ರಾಮು ರಾಥೋಡ್ ಹಾಗೂ ಕಿಟ್ಟು ಎಂಬುವವರು ಮೃತಪಟ್ಟಿದ್ದಾರೆ. ಮೃತರಿಬ್ಬರು ತೊರವಿ ತಾಂಡಾ ನಿವಾಸಿಗಳೆಂದು ತಿಳಿದುಬಂದಿದೆ. ರತ್ನಾಪುರ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರದಲ್ಲಿ ಹ್ಯಾಂಡ್‌ ಬ್ರೇಕ್‌ ಹಾಕುವುದು ಮರೆತ ಚಾಲಕ

ವಿಜಯನಗರದ ಹೊಸಪೇಟೆಯ ಹೊರವಲಯದಲ್ಲಿ ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಲಾರಿ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿತ್ತು. ಚಾಲಕ ಟೀ ಕುಡಿಯಲು ಲಾರಿ ನಿಲ್ಲಿಸಿದ್ದ ಆದರೆ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮೆರೆತು ಹೊರಟು ಹೋಗಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಲಾರಿ ತನ್ನಿಂದ ತಾನೇ ಮುಂದೆ ಹೋಗಿದೆ. ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿದ ಲಾರಿ, ರಸ್ತೆಯ ಬಲಭಾಗಕ್ಕೆ ಹೋಗಿ ನಿಂತಿದೆ. ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ಗುದ್ದಿಲ್ಲ, ಯಾರಿಗೂ ಸಮಸ್ಯೆಯೂ ಆಗಿಲ್ಲ. ಹೊಸಪೇಟೆಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯಪುರದಲ್ಲಿ ಟ್ರಕ್‌ ಪಲ್ಟಿ

ವಿಜಯಪುರದ ಸಾರವಾಡ ಬಳಿ ಬೃಹತ್ ಟ್ರಕ್ ಪಲ್ಟಿಯಾಗಿದೆ. ತಂಪು ಪಾನೀಯ ತುಂಬಿದ್ದ ಪ್ಲಾಸ್ಟಿಕ್ ಬಾಟಲಿಗಳ ಲೋಡ್ ಕೊಂಡೊಯ್ಯುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿದೆ. ಟ್ರಕ್‌ನಡಿ ಸಿಲುಕಿದ್ದ ಚಾಲಕನನ್ನು ಸತತ ಒಂದು ತಾಸು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ರಕ್ಷಣೆ ನಂತರ ಗಾಯಾಳು ಚಾಲಕನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೋವಾದಿಂದ ಹೈದ್ರಾಬಾದ್ ತೆರಳುತ್ತಿದ್ದಾಗ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version