ನವದೆಹಲಿ: ಹೊಸ ವರ್ಷದ ದಿನದಂದು ನವದೆಹಲಿಯ ಸುಲ್ತಾನಪುರಿಯಲ್ಲಿ ನಡೆದಿದ್ದ ಭೀಕರ (Accident in Delhi) ಅಪಘಾತದ ದೃಶ್ಯ ಇದೀಗ ಪೊಲೀಸರಿಗೆ ಸಿಕ್ಕಿದೆ. ಕಾರಿಗೆ ಯುವತಿಯ ದೇಹ ಸಿಕ್ಕಿಬಿದ್ದಿದ್ದರೂ ಲೆಕ್ಕಿಸದ ಚಾಲಕ, ಕಾರನ್ನು ಯು-ಟರ್ನ್ ತೆಗೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Accident In Delhi | ಕಾರಿನ ಅಡಿಗೆ ಸಿಲುಕಿದ ಯುವತಿಯನ್ನು 12 ಕಿ.ಮೀ ಎಳೆದುಕೊಂಡು ಹೋದ ಚಾಲಕ, ಐವರ ಸೆರೆ
ಅಮನ್ ವಿಹಾರ್ ನಿವಾಸಿಯಾದ 20 ವರ್ಷದ ಯುವತಿ ಭಾನುವಾರ ಮುಂಜಾನೆ 3.20ರ ಸಮಯಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಮಾರುತಿ ಸುಜುಕಿ ಬೊಲೆನೊ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ಆಕೆ ಸ್ಕೂಟಿ ಕೆಳಗೆ ಬಿದ್ದು, ದೇಹ ಕಾರಿಗೆ ಸಿಲುಕಿಕೊಂಡಿದೆ. ಅದನ್ನು ಲೆಕ್ಕಿಸದ ಚಾಲಕ ಸುಮಾರು 18ಕಿ.ಮೀ. ನಷ್ಟು ದೂರ ಆಕೆಯ ದೇಹವನ್ನು ಎಳೆದುಕೊಂಡೇ ಸಾಗಿದ್ದಾನೆ. ಈ ದೃಶ್ಯವನ್ನು ಅಲ್ಲಿ ಮಿಠಾಯಿ ಅಂಗಡಿ ಇಟ್ಟುಕೊಂಡಿರುವ ದೀಪಕ್ ದಹಿಯಾ ಅವರು ಕಣ್ಣಾರೆ ಕಂಡಿದ್ದಾರೆ. ಅದೆಷ್ಟು ಬಾರಿ ಕೂಗಿದರೂ ಚಾಲಕ ಕಾರು ನಿಲ್ಲಿಸಲಿಲ್ಲವೆಂದು ಅವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
“3.20ರ ಸಮಯಕ್ಕೆ ನನ್ನ ಅಂಗಡಿಯಿಂದ 100 ಮೀಟರ್ ದೂರದಲ್ಲಿ ಜೋರಾದ ಸದ್ದು ಕೇಳಿತು. ಬಹುಶಃ ಕಾರಿನ ಟೈರ್ ಬ್ಲಾಸ್ಟ್ ಆಗಿರಬಹುದೆಂದು ನೋಡಿದರೆ, ಕಾರು ಯುವತಿಯ ದೇಹವನ್ನು ಎಳೆದುಕೊಂಡು ಬರುವುದು ಕಂಡಿತು. ಸುಮಾರು 4-5ಕಿ.ಮೀ.ನಷ್ಟು ದೂರವಿರುವ ರಸ್ತೆಯಲ್ಲೇ ಕಾರು ಹಲವು ಬಾರಿ ಯು-ಟರ್ನ್ಗಳನ್ನು ತೆಗೆದುಕೊಂಡು ಸಂಚರಿಸಿತು. ನಾನು ಬೈಕ್ನಲ್ಲಿ ಕಾರನ್ನು ಹಿಂಬಾಲಿಸಿದೆ. ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಸಾಕಷ್ಟು ಸಮಯವಾದ ನಂತರ ಯುವತಿ ಶವ ರಸ್ತೆಗೆ ಬಿದ್ದಿತು. ನಂತರ ಕಾರು ಅಲ್ಲಿಂದ ಪರಾರಿಯಾಯಿತು” ಎಂದಿದ್ದಾರೆ ದೀಪಕ್.
ಯುವತಿಯ ದೇಹವನ್ನು ಕಾರು ಕಂಝಾವಲ್ ನಗರದವರೆಗೆ ಎಳೆದು ತಂದಿದೆ. ಅಲ್ಲಿ ಪೊಲೀಸರು ಕಾರನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿದ್ದ ಐವರನ್ನು ಬಂಧಿಸಿದ್ದಾರೆ. ರೋಹಿಣಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ (Accident in Delhi) ದಾಖಲಾಗಿದೆ.
ಇದನ್ನೂ ಓದಿ: ತಲೆ ಎತ್ತಲು ಸಾಧ್ಯವಾಗದಷ್ಟು ನಾಚಿಕೆ ಎನ್ನಿಸುತ್ತಿದೆ; 20 ವರ್ಷದ ಯುವತಿ ಸಾವಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರತಿಕ್ರಿಯೆ