ನವ ದೆಹಲಿ: ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಒಂದು ಭಯಾನಕ ಘಟನೆ ನಡೆದಿದೆ. 17 ವರ್ಷದ ಯುವತಿಯ ಮೇಲೆ ಇಬ್ಬರು ಹುಡುಗರು ಆ್ಯಸಿಡ್ ಎರಚಿದ್ದಾರೆ. ಆ ಹುಡುಗಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಸದ್ಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಸಿಯುದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈಕೆ ಬುಧವಾರ ಮುಂಜಾನೆ 7.30ರ ಹೊತ್ತಿಗೆ ತನ್ನ ತಂಗಿ ಜತೆ ಪಿಎಸ್ ಮೋಹನ್ ಗಾರ್ಡನ್ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್ನಲ್ಲಿ ಬಂದ ಇಬ್ಬರು ಹುಡುಗರು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಒಬ್ಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಹುಡುಗಿ ಅಡ್ಮಿಟ್ ಆಗಿರುವ ಸಫ್ದರ್ಜಂಗ್ ಆಸ್ಪತ್ರೆಗೆ ದ್ವಾರಕಾ ಜಿಲ್ಲೆಯ ಡಿಸಿಪಿ ಭೇಟಿಕೊಟ್ಟಿದ್ದಾರೆ. ಹುಡುಗಿಯ ಸಂಬಂಧಿಕರು, ಪಾಲಕರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಇನ್ನು ಸಂತ್ರಸ್ತ ಹುಡುಗಿಯ ಮುಖ ಸುಟ್ಟು ಹೋಗಿದ್ದು, ಕಣ್ಣಿನ ಸುತ್ತ ಊದಿಕೊಂಡಿದೆ. ಬೈಕ್ಗೆ ನಂಬರ್ ಪ್ಲೇಟ್ ಇರಲಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಅಕ್ಕನ ಮೇಲೆ ಆ್ಯಸಿಡ್ ದಾಳಿ ಆಗುತ್ತಿದ್ದಂತೆ, ಜತೆಗಿದ್ದ ತಂಗಿ ಮನೆಗೆ ಓಡಿಹೋಗಿ ವಿಷಯ ತಿಳಿಸಿದ್ದಾಳೆ. ಬಳಿಕ ಮನೆಯವರೆಲ್ಲ ಸ್ಥಳಕ್ಕೆ ಓಡಿದ್ದಾರೆ. ಸುಮಾರು 9ಗಂಟೆ ಹೊತ್ತಿಗೆ ಪೊಲೀಸರಿಗೆ ಕರೆ ಹೋಗಿದೆ.
ಸ್ಥಳೀಯ ಅಂಗಡಿಯವನೊಬ್ಬ ಮಾಧ್ಯಮವೊಂದರ ಜತೆ ಮಾತನಾಡಿ, ‘ಇಬ್ಬರೂ ಹುಡುಗಿಯರು ಶಾಲೆಗೆ ಹೋಗುತ್ತಿದ್ದರು. ಸುಮಾರು 7.30ರ ಹೊತ್ತಿಗೆ ಆ್ಯಸಿಡ್ ದಾಳಿಯಾಗಿದೆ. ಆ ಹುಡುಗಿ ದೊಡ್ಡದಾಗಿ ಅರಚುತ್ತಿದ್ದಳು. ಯಾರಾದರೂ ಸಹಾಯಕ್ಕೆ ಬನ್ನಿ ಎಂದು ಕೂಗುತ್ತ, ರಸ್ತೆಯಿಡೀ ಓಡುತ್ತಿದ್ದಳು. ನಾನು ಮತ್ತು ಇನ್ನಿಬ್ಬರು ಹೋಗಿ ಆಕೆಯ ಮೈಮೇಲೆ ನೀರು ಸುರಿದೆವು. ಆಕೆಯ ಕಣ್ಣಿನ ಬಣ್ಣ ಆಗಲೇ ಬದಲಾಗಿಹೋಗಿತ್ತು’ ಎಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ ಏರ್ಪೋರ್ಟ್ನಲ್ಲಿ ಜನದಟ್ಟಣೆ; ಪ್ರಯಾಣಿಕರು ಮೂರುವರೆ ತಾಸು ಮೊದಲೇ ವಿಮಾನ ನಿಲ್ದಾಣ ತಲುಪಬೇಕು ಎಂದ ಇಂಡಿಗೋ