ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ವಿನೋದ್ ರಾಜ್ ಆಗಮಿಸಿದ್ದರು. ದರ್ಶನ್ ಅವರನ್ನ ಕಂಡು ವಿನೋದ್ ರಾಜ್ ಭಾವುಕರಾಗಿದ್ದರು. ದರ್ಶನ್ ಅವರನ್ನ ಮೀಟ್ ಮಾಡಿದ್ಮೇಲೆ ಕಣ್ಣೀರು ಹಾಕುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಜುಲೈ 26ರಂದು ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ರಾಜಿ ಸಂಧಾನಕ್ಕಾಗಿ ಹೋಗಿದ್ದರು ಎಂಬಂತೆ ಬಿಂಬಿತವಾಗಿದೆ ಎಂದು ಇದೀಗ ವಿನೋದ್ ರಾಜ್ ಬೇಸರ ಹೊರ ಹಾಕಿದ್ದಾರೆ.
ಈ ಬಗ್ಗೆ ವಿನೋದ್ ರಾಜ್ ವಿಡಿಯೊ ಮೂಲಕ ಮಾತನಾಡಿ ʻʻದರ್ಶನ್ ಅವರನ್ನ ಒಬ್ಬ ಕಲಾವಿದ ಎನ್ನುವ ಕಾರಣಕ್ಕೆ ಭೇಟಿ ಮಾಡಿ ಬಂದೆ. ಮೊನ್ನೆ ನಾನು ದರ್ಶನ್ ಅವರನ್ನು ನೋಡೋಕೆ ಹೋಗಿದ್ದೆ. ಬಳಿಕ ರೇಣುಕಾ ಸ್ವಾಮಿ ಮನೆಗೆ ಹೋಗಿ ಬಂದೆ. ವಾಹಿನಿಗಳ ಮೂಲಕ ನನಗೆ ಅರ್ಥವಾಗಿದ್ದು ಏನೆಂದರೆ ರಾಜಿ ಸಂಧಾನಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಅಲ್ಲಿ ಹೋಗಿದ್ದೆ ಎಂದು ಸುದ್ದಿಗಳು ವೈರಲ್ ಆಯ್ತು. ಖಂಡತ ಅದು ಅಲ್ವೇ ಅಲ್ಲ. ಕಲಾವಿದರು ಎನ್ನುವ ದೃಷ್ಟಿಯಿಂದ ನಾನು ಹೋಗಿದ್ದೆ. ರೇಣುಕಾ ಸ್ವಾಮಿ ಅವರ ಶ್ರೀಮಿತಿ ಅವರು ಗರ್ಭಿಣಿ. ಹುಟ್ಟುವ ಮಗುಗೆ ಒಳ್ಳಯದ್ದೇನಾದರೂ ಮಾಡಲಿಕ್ಕೆ ಆಗುತ್ತಾ ಎನ್ನುವ ದೃಷ್ಟಿಯಿಂದ ನಾನು ಸಹಾಯ ಮಾಡಿ ಬಂದೆ. ನಮ್ಮಿಂದ ಆದ ಸಣ್ಣ ಕಾಣಿಕೆ ಅದು. ಯಾವುದೇ ರಾಜಿ ಸಂಧಾನ ಅಲ್ಲ. ಆ ತರ ಕೆಲಸ ಕೂಡ ನಾವು ಮಾಡಲ್ಲʼʼಎಂದು ಬೇಸರ ಹೊರ ಹಾಕಿದರು.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಹಣ ಸಹಾಯ ಮಾಡಿ, ದರ್ಶನ್ ಪರವಾಗಿ ವಾದ ಮಾಡಿದ ನಟ ಗಣೇಶ್ ರಾವ್!
ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್ ಮಾತನಾಡಿ, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರುತ್ತಿದೆ. ಜೀವನದಲ್ಲಿ ಮನುಷ್ಯ ಹೇಗೆ ಬಾಳಬೇಕು, ಹೇಗೆ ನಡೆದುಕೊಳ್ಳಬೇಕು, ಯಾವ ದಿಕ್ಕಿನಲ್ಲಿ ಮಾನವೀಯತೆ, ಮನುಷತ್ವ ಸಾಗುತ್ತಿದೆ, ಮನುಷ್ಯತ್ವ ಇದೆಯಾ ಎನ್ನುವುದು ನಮ್ಮನ್ನೇ ಮುಟ್ಟಿಕೊಂಡು ನೋಡುವಂತಹ ಕಾಲ ಬಂದಿದೆ. ಜೀವನ ಇಡೀ ಸಂಪದಾನೆ, ಹೆಸರು ಮಾಡುವುದು ಅಲ್ಲವೇ ಅಲ್ಲ. ಜೀವನ ಇಡಿ ಜೀವಗಳ ಬಗ್ಗೆ ಕಾಳಜಿ ತೆಗೆದುಕೊಂಡು ಬದುಕಬೇಕು. ಪ್ರತಿಯೊಬ್ಬರ ಜೀವನದಲ್ಲೂ ಜೀವಗಳಿವೆ. ಜೀವರಾಶಿಗಳನ್ನ ಭಗವಂತ ತಂದೆ ತಾಯಿ ರೂಪದಲ್ಲಿ ಸೃಷ್ಟಿ ಮಾಡಿರುತ್ತಾನೆ. ಅವರೂ ಕೂಡ ಚೆನ್ನಾಗಿ ಇರಬೇಕು ಎಂದು ಬೆಳೆಸುತ್ತಾರೆ. ಎಲ್ಲೋ ಒಂದು ಅತಾಚುರ್ಯ, ಕೆಟ್ಟದ್ದು ನಡೆಯುತ್ತೆ. ಕೆಟ್ಟದ್ದು ಜಾಸ್ತಿ ಆದಾಗ ಇಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಹೆಚ್ಚಾಗಬಾರದು. ಸಮಾಜದಲ್ಲಿ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್ಕುಮಾರ್ ಹೇಳಿದ್ದರು.
ರೇಣುಕಾ ಸ್ವಾಮಿ ಕುಟುಂಬದವರನ್ನು ಸಂತೈಸಿದ ವಿನೋದ್ ರಾಜ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು.
ಈ ಹಿಂದೆ ದರ್ಶನ್ ಅವರನ್ನು ಭೇಟಿಯಾದ ವಿನೋದ್ ರಾಜ್ ಮಾತನಾಡಿ ʻʻನಾವು 5 ಜನ ಹೋಗಿದ್ವಿ. ಹೆಚ್ಚೇನೂ ಮಾತಾಡೋಕೆ ಆಗಲಿಲ್ಲ. ಕಷ್ಟ – ಸುಖ ಮಾತನಾಡಿದ್ವಿ ಅಷ್ಟೇ. ವಿಜಯಲಕ್ಷ್ಮೀ ಅವರಿಗೂ ಏನೂ ಗೊತ್ತಾಗುತ್ತಿಲ್ಲ. ವಕೀಲರು ಮಾತನಾಡಿದರು ಅಷ್ಟೇ. ಜೈಲಿನ ನಿಯಮಗಳು ಕಟ್ಟುನಿಟ್ಟಾಗಿವೆ. ಇಷ್ಟು ಕಹಿಯಾಗಿ, ಅವರನ್ನ ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ ಅನಿಸ್ತಾಯಿದೆ. ನನ್ನ ಕಣ್ಣುಗಳನ್ನೇ ನಾನು ನಂಬೋಕೆ ಆಗಲಿಲ್ಲ. ಆದರೂ ನಂಬಬೇಕಾದ ಅನಿವಾರ್ಯತೆ ಆಗೋಯ್ತು. ಕಣ್ಣೀರು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಸಂಸಾರ ಹಾಗೂ ಅಭಿಮಾನಿಗಳ ಜೊತೆಗೆ ಸೇರಿಕೊಳ್ಳಲಿ. ತಲೆಯೆತ್ತಿ ನಡೆಯುವಂತಹ ದರ್ಶನ್ ಆಗಲಿ. ಎಲ್ಲರಿಗೂ ದರ್ಶನ ಕೊಡಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ’’ ಎಂದಿದ್ದರು.