ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ವಿಚಾರದಲ್ಲಿ ದರ್ಶನ್ ಹಾಗೂ ಗ್ಯಾಂಗ್ ಈಗಾಗಲೇ ಅರೆಸ್ಟ್ ಆಗಿದೆ. ಇದೀಗ ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. 10 ವರ್ಷಗಳ ಹಿಂದೆ, ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬುವರು 10 ವರ್ಷಗಳ ಹಿಂದೆ ಪರಿಹಾರ ಕೇಳಲು ಹೋಗಿ ಕಣ್ಣು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಈ ರೀತಿ ವಿಕೃತಿ ತೋರಿಸಲಾಗಿತ್ತು ಎನ್ನಲಾಗಿದೆ.
ಏನಿದು ಘಟನೆ?
ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್ಹೌಸ್ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ವೇಳೆ ಇವರಿಗೆ ಎತ್ತು ಕೊಂಬಿನಿಂದ ತಿವಿದಿತ್ತು. ಎತ್ತಿನ ಕೊಂಬು ಕಣ್ಣಿನಿಂದ ತೂರಿ ತಲೆ ಹೊರಗೆ ಬಂದಿತ್ತು. ಇದರಿಂದ ಅವರ ಕಣ್ಣು ಹೋಗಿತ್ತು. ಆ ಬಳಿಕ ದರ್ಶನ್ ಕಡೆಯವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು. ಆ ಬಳಿಕ ದರ್ಶನ್ ಈ ಕುಟುಂಬದ ಕಡೆ ತಿರುಗಿಯೂ ನೋಡಿಲ್ಲ. ಬಳಿಕ ಕಾರ್ಮಿಕ ತನ್ನ ಸಂಬಂಧಿಕರ ಜತೆ ಪರಿಹಾರ ಕೇಳಲು ಫಾರ್ಮ್ ಹೌಸ್ಗೆ ಹೋದರೆ ದರ್ಶನ್ ಗ್ಯಾಂಗ್ ಅವರ ಮೇಲೆ ಸಾಕುನಾಯಿ ಛೂ ಬಿಟ್ಟಿದ್ದರಂತೆ. ಮೈಸೂರಿನ ಹೊಟೇಲ್ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
ಒಂದು ವೇಳೆ ಈ ವಿಚಾರ ಬಾಯ್ಬಿಟ್ಟರೆ ಪರಿಸ್ಥಿತಿ ಸರಿ ಇರಲ್ಲ ಎಂದು ಬೆದರಿಕೆ ಕೂಡ ಹಾಕಿತ್ತಂತೆ ದರ್ಶನ್ ಟೀಂ. ಇದೀಗ ಮಹೇಶ್ ಅವರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ತಾಯಿ ಮತ್ತು ಹೆಂಡತಿಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ಮಹೇಶ್ ಆರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್ ಬಗ್ಗೆ ರಾಮ್ಗೋಪಾಲ್ ವರ್ಮಾ ಹೇಳಿದ್ದು ಹೀಗೆ…
ನಟ ದರ್ಶನ್ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು
ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್ (Actor Darshan) ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಹಲವರು ಲಾಕ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ನಟ ದರ್ಶನ್ ವಿರುದ್ಧ ಮಂಡ್ಯ ಅನ್ನದಾತರು ಸಿಡಿದೆದ್ದಿದ್ದರು.ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ದರ್ಶನ್ ಹಾಗೂ ಇತರೆ ಕನ್ನಡ ನಟರು ಡಾ.ರಾಜಕುಮಾರ್ ಆದರ್ಶ ಪಾಲಿಸಲಿ. ಕೇವಲ ಹಣಕ್ಕಾಗಿ ಕಲಾವಿದರಾಗುವುದು ಬೇಡ ಎಂದರು. ಈಗೀನ ನಟರು ಪೇಯ್ಡ್ ಆಕ್ಟರ್ಸ್ ಆಗಿದ್ದಾರೆ. ಇವರಿಗೆ ಯಾವುದೇ ಮೌಲ್ಯಗಳಿಲ್ಲ.ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು. ತಪ್ಪಿತಸ್ಥರಿಗೆ ಕಾನೂನು ಕ್ರಮವಾಗಬೇಕು ಎಂದು ಚನ್ನಪಟ್ಟಣದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಗ್ರಹಿಸಿದರು. ನಗರದ ಅಂಚೆಕಚೇರಿ ರಸ್ತೆಯಲ್ಲಿ ಡಾ. ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.