ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಲೇ ಇದ್ದಾರೆ. ಈಗಾಗಲೇ ಆರೋಪಿಗಳ ಬಳಿ (Actor Darshan) ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. , ಮೊಬೈಲ್‌ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿದ್ದವು. ಇದೀಗ ತನಿಖೆ ವೇಳೆ ಮಹತ್ವದ ಸಾಕ್ಷಿವೊಂದು ಪೊಲೀಸರಿಗೆ ಲಭಿಸಿದೆ. ಅದುವೇ ʻಪೊಲೀಸ್ ಲಾಠಿʼ. ಈ ಪೊಲೀಸ್ ಲಾಠಿ ಪಟ್ಟಣಗೆರೆ ಶೆಡ್ ಗೆ ಹೇಗೆ ಬಂತು? ಎಂದು ವಿಚಾರಣೆ ನಡೆಸುತ್ತಿದ್ದಾರೆ.
ದರ್ಶನ್ ಗ್ಯಾಂಗ್‌ಗೆ ಪೊಲೀಸ್ ಲಾಠಿ ಸಿಕ್ಕಿದ್ದು ಹೇಗೆ?
ದರ್ಶನ್ ಬರ್ತ್‌ಡೇ ದಿನ ಪೊಲೀಸ್ ಸಿಬ್ಬಂದಿ ದಚ್ಚು ಮನೆಯ ಬಳಿ ಲಾಠಿ ಬಿಟ್ಟು ಹೋಗಿದ್ದರು. ಆ ಲಾಠಿ ದರ್ಶನ್ ಮನೆಯ ಸೆಕ್ಯೂರಿಟಿ ಗಾರ್ಡ್ ರೂಂನಲ್ಲಿ ಎತ್ತಿ ಇಡಲಾಗಿತ್ತು. ಮನೆಯಲ್ಲಿದ್ದ ಲಾಠಿಯನ್ನ ಶೆಡ್‌ನಲ್ಲಿದ್ದ ವ್ಯಕ್ತಿಯೊಬ್ಬನನ್ನ ತನ್ನ ಮನೆಗೆ ಕಳುಹಿಸಿ ಲಾಠಿ ತರಿಸಿಕೊಂಡಿದ್ದರು ದರ್ಶನ್. ಶೆಡ್ ನಿಂದ ದರ್ಶನ್ ಮನೆಗೆ ಹೋಗಿ ಲಾಠಿ ತಂದು ಕೊಡುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೇ ಲಾಠಿ ಬಳಕೆ ಮಾಡಿ ರೇಣುಕಾಸ್ವಾಮಿ ಮೇಲೆ ದರ್ಶನ್, ಗ್ಯಾಂಗ್ ಹಲ್ಲೆ ಮಾಡಿದೆ. ಲಾಠಿ ಮುರಿಯುವವರೆಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಶೆಡ್‌ನಲ್ಲಿ ಹಲ್ಲೆಗೆ ಬಳಕೆ ಮಾಡಿದ್ದ ಲಾಠಿಯ ಪೀಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಕ್ತದ ಕಲೆ ಇರುವ ಲಾಠಿಯ ಪೀಸ್‌ಗಳು ಪೊಲೀಸರ ವಶ ಆಗಿದೆ. ಅದೇ ಲಾಠಿಯ ಮೇಲೆ ಫಿಂಗರ್ ಪ್ರಿಂಟ್ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಎಫ್ಎಸ್ಎಲ್ ವರದಿ ಬಳಿಕ ಲಾಠಿಯಿಂದ ಯಾರು ಹೊಡೆದವರು ಎಂಬುದು ತಿಳಿಯಲಿದೆ. ಸದ್ಯ ಸಾಕ್ಷಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್, ಪ್ರದೋಷ್‌ನಿಂದ ಮೂರು ಪಿಸ್ತೂಲ್ ವಶಕ್ಕೆ
ಈ ಮುಂಚೆ ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಭಯಾನಕ ಅಂಶಗಳು ಪತ್ತೆಯಾಗಿತ್ತು. ರೇಣುಕಾಸ್ವಾಮಿ ದೇಹದ ಮೇಲೆ 30ಕ್ಕೂ ಅಧಿಕ ಗಾಯಗಳು ಕಂಡುಬಂದಿದ್ದು, ತಲೆ ಮೇಲೆ ನಾಲ್ಕು ಬಲವಾದ ಗಾಯಗಳು ಪತ್ತೆಯಾಗಿದ್ದವು. ಸಾಯುವ ಮುನ್ನ ನಾಲ್ಕು ಬಾರಿ ಎಲೆಕ್ಟ್ರಿಕ್ ಶಾಕ್ ನೀಡಿರುವುದು ತಿಳಿದುಬಂದಿತ್ತು. ಹೀಗಾಗಿ ತೀವ್ರ ರಕ್ತ ಸ್ರಾವದಿಂದ ರೇಣುಕಾಸ್ವಾಮಿ ಸಾವನ್ನಪ್ಪಿರುವುದು ದೃಢವಾಗಿತ್ತು. ಕಬ್ಬಿಣದ ರಾಡ್, ದೊಣ್ಣೆಯಿಂದ ಹಲ್ಲೆ ನಡೆಸಿದ್ದರಿಂದ ರಕ್ತ ಹೆಪ್ಪುಗಟ್ಟಿ, ರಕ್ತಸಾವ್ರದಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿತ್ತು.