ನವ ದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಟ್ವೀಟ್ ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಆಲ್ಟ್ ನ್ಯೂಸ್ (Alt news) ಎಂಬ ಫ್ಯಾಕ್ಟ್ ಚೆಕ್ ವೆಬ್‌ಸೈಟ್‌ನ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್‌ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಜೂನ್ ೨೭ರಂದು ದಿಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದು, ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಶನಿವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದಲ್ಲದೆ, ಸಮಗ್ರ ತನಿಖೆಗಾಗಿ ಇನ್ನೂ ೧೪ ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕು ಎಂದು ಕೋರಲಾಗಿತ್ತು.
ಶನಿವಾರ ಹೊಸದಾಗಿ ಆತನ ಮೇಲೆ ಸಾಕ್ಷ್ಯ ನಾಶ (ಐಪಿಸಿ ಸೆಕ್ಷನ್ ೨೦೧), ಕ್ರಿಮಿನಲ್ ಸಂಚು (೧೨೦ಬಿ), ವಿದೇಶಿ ಸಹಾಯಧನ ನಿಯಂತ್ರ ಕಾಯಿದೆ (ಎಫ್‌ಆರ್‌ಸಿಎ) ಯ ಸೆಕ್ಷನ್ ೩೫ರ ಅಡಿಯಲ್ಲಿ ಹೊಸ ಆರೋಪಗಳನ್ನು ಮಾಡಲಾಗಿದೆ.
ಜುಬೇರ್ ನಿರ್ದೇಶಕನಾಗಿರುವ ಮಾಧ್ಯಮ ಸಂಸ್ಥೆಗೆ ಪಾಕಿಸ್ತಾನ, ಸಿರಿಯಾದಿಂದ ಹಣ ಬಂದಿದೆ. ಸಿಂಗಾಪುರ, ಯುಎಇ, ಸೌದಿ ಅರೇಬಿಯಾದಿಂದ ಕೂಡ ಹಣ ಬಂದಿರುವುದು ಖಚಿತ ಪಟ್ಟಿದೆ. ಈ ಹಣ ಬಂದಿರುವುದರ ಮತ್ತು ಆದಾಯ ತೆರಿಗೆ ವಂಚನೆ ಕುರಿತು ತನಿಖೆ ನಡೆಯಬೇಕಾಗಿದೆ ಎಂದು ಶನಿವಾರ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ್ ನ್ಯಾಯಾಲಯಕ್ಕೆ ತಿಳಿಸಿದರು.
ವಿದೇಶದಿಂದ ಬಂದಿರುವ ಹಣವು ಜುಬೇರ್ ಅವರ ಖಾತೆಗೆ ಬಂದಿಲ್ಲ. ಮಾಧ್ಯಮ ಸಂಸ್ಥೆಯ ಖಾತೆಗೆ ಬಂದಿದೆ. ಈ ಸಂಸ್ಥೆಯ ನಿರ್ದೇಶಕರಾಗಿರುವುದು ಅಪರಾಧವೇನಲ್ಲ ಎಂದು ಜುಬೇರ್ ಪರ ವಕೀಲರು ವಾದಿಸಿದರು. ಜಾಮೀನು ನೀಡಿಕೆಯ ಪರ ಮತ್ತು ವಿರೋಧ ವಾದಗಳನ್ನು ಆಲಿಸಿದ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸುವ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ| ಆಲ್ಟ್ ನ್ಯೂಸ್‌ಸಹ ಸ್ಥಾಪಕ ಮೊಹಮ್ಮದ್ ಜುಬೇರ್ ಬೆಂಗಳೂರು ಮನೆ ಮಹಜರ್