ಚೆನ್ನೈ: ಮಾನಸಿಕ ಅಸ್ವಸ್ಥರಿಗಾಗಿ ನಿರ್ಮಿಸಿಕೊಂಡಿದ್ದ ಆಶ್ರಮವೊಂದು ನರಕ ರೂಪವಾಗಿ ಕಾಡಿರುವ ವಿಚಿತ್ರ ಕಥೆ ಇದೀಗ ಹೊರಬಿದ್ದಿದೆ. ತಮಿಳುನಾಡಿನ ವಿಲ್ಲುಪುರಂನಲ್ಲಿರುವ ಆಶ್ರಮದಲ್ಲಿ (Anbu Jothi Ashram) ಆಶ್ರಯ ಪಡೆಯುತ್ತಿದ್ದರ ಮೇಲೆ ನಿರಂತರ ಅತ್ಯಾಚಾರ ಮತ್ತು ಹಿಂಸಾಚಾರವಾಗಿರುವ ವಿಚಾರ ತಿಳಿದುಬಂದಿದೆ.
ಇದನ್ನೂ ಓದಿ: Virat Kohli | ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ದಂಪತಿ: ಮಗಳ ವಿಡಿಯೊ ವೈರಲ್!
ವಿಲ್ಲುಪುರಂನ ಅನ್ಬು ಜ್ಯೋತಿ ಆಶ್ರಮದಲ್ಲಿ ಈ ರೀತಿಯ ಹಿಂಸಾಚಾರವಾಗುತ್ತಿರುವುದಾಗಿ ವರದಿಯಾಗಿದೆ. ಅಮೆರಿಕದಲ್ಲಿರುವ ಸಲೀಂ ಖಾನ್ ಹೆಸರಿನ ವ್ಯಕ್ತಿಯು ತನ್ನ ತಂದೆ ಈ ಆಶ್ರಮದಿಂದ ಕಾಣೆಯಾಗಿರುವುದಾಗಿ ಪೊಲೀಸರಲ್ಲಿ ದೂರು ನೀಡಿರುವ ಹಿನ್ನೆಲೆ ಆಶ್ರಮದ ಬಗ್ಗೆ ಹಲವಾರು ಸತ್ಯಗಳು ಬೆಳಕಿಗೆ ಬರುವಂತಾಗಿದೆ. ಸಲೀಂ ಅವರ ತಂದೆ 2021ರಲ್ಲಿ ಆಶ್ರಮ ಸೇರಿಕೊಂಡಿದ್ದಾಗಿ ಹೇಳಲಾಗಿದೆ.
ಜುಬಿನ್ ಮತ್ತು ಅವರ ಪತ್ನಿ ಮರಿಯಾ ಕಳೆದ 17 ವರ್ಷಗಳಿಂದ ಈ ಆಶ್ರಮವನ್ನು ನಡೆಸುತ್ತಿದ್ದಾರೆ. ಪರವಾನಗಿಯನ್ನು ಪಡೆಯದೆಯೇ ಅಕ್ರಮವಾಗಿ ಆಶ್ರಮ ನಡೆಸಲಾಗುತ್ತಿದೆ. ಇಲ್ಲಿಗೆ ಆಶ್ರಯಕ್ಕೆಂದು ಬರುವವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಅವರೇನಾದರೂ ತಪ್ಪಿಸಿಕೊಳ್ಳಲು ಹೊರಟರೆ ಮಂಗಗಳನ್ನು ಬಿಟ್ಟು ಅವರ ಮೇಲೆ ಹಲ್ಲೆ ನಡೆಸಲಾಗುತ್ತದೆ. ಕಟ್ಟಿ ಹಾಕಿ ಹಿಂಸೆ ನೀಡಲಾಗುತ್ತದೆ ಎಂದು ಆಶ್ರಮದಲ್ಲಿರುವವರು ಹೇಳಿಕೊಂಡಿದ್ದಾರೆ.
ಆಶ್ರಮದ ಪರಿಶೀಲನೆ ನಡೆಸಿರುವ ಪೊಲೀಸರು ಜುಬಿನ್, ಮರಿಯಾ ಸೇರಿ ಒಟ್ಟು 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಜುಬಿನ್ ಮತ್ತು ಮರಿಯಾ ಆಸ್ಪತ್ರೆಯಲ್ಲಿದ್ದಾರೆ. ಇನ್ನಿಬ್ಬರು ಕಾಣೆಯಾಗಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: Virat-Anushka | ಆಶ್ರಮಕ್ಕೆ ಭೇಟಿ ಕೊಟ್ಟು ಹೊದಿಕೆ ಹಂಚಿದ ವಿರಾಟ್-ಅನುಷ್ಕಾ
ಆಶ್ರಮದಲ್ಲಿ ಇರುವವರ ಮೇಲೆ ಹಲ್ಲೆ ಮಾಡುವುದಕ್ಕೆಂದೇ ಎರಡು ಮಂಗಗಳನ್ನು ಸಾಕಲಾಗಿದೆ. ಅವುಗಳನ್ನು ಪಂಜರದಲ್ಲಿ ಇಡಲಾಗಿದೆ. ಪೊಲೀಸರು ಆಶ್ರಮಕ್ಕೆ ಬರುವ ವಿಚಾರ ತಿಳಿದ ಜುಬಿನ್ ದಂಪತಿ ಅವುಗಳನ್ನು ಅಲ್ಲಿಂದ ಹೊರ ಬಿಡಲೆಂದು ಪಂಜರ ತೆರೆದಿದ್ದಾರೆ. ಆಗ ಮಂಗಗಳು ಅವರಿಗೇ ಹಲ್ಲೆ ಮಾಡಿವೆ. ಅದರಿಂದಾಗಿ ಗಾಯಾಳುಗಳಾಗಿರುವ ಅವರು ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜುಬಿನ್ ದಂಪತಿ, “ನಾವು 17 ವರ್ಷಗಳಿಂದ ಆಶ್ರಮ ನಡೆಸುತ್ತಿದ್ದೇವೆ. ಬೀದಿ ಬದಿ ಇರುವ ಮಾನಸಿಕ ಅಸ್ವಸ್ಥರನ್ನು ತಂದು ಸಲಹುತ್ತಿದ್ದೇವೆ. ಎಷ್ಟೋ ಕುಟುಂಬಗಳು ಅವರಲ್ಲಿರುವ ಮಾನಸಿಕ ಅಸ್ವಸ್ಥರನ್ನು ನಮ್ಮಲ್ಲಿಗೆ ತಂದು ಬಿಟ್ಟು ಹೋಗುತ್ತಾರೆ. ಇದುವರೆಗೆ ನಮ್ಮ ಆಶ್ರಮದ ಬಗ್ಗೆ ಒಂದೂ ದೂರು ಕೇಳಿಬಂದಿರಲಿಲ್ಲ. ಆದರೆ ಈಗ ಅತ್ಯಾಚಾರ, ಹಿಂಸಾಚಾರದ ಆರೋಪ ಮಾಡಲಾಗುತ್ತಿದೆ. ಇದು ನಮ್ಮ ದುರಾದೃಷ್ಟ” ಎಂದು ಹೇಳಿದ್ದಾರೆ.