ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ (Tamil Nadu Suicide Case)ಮಾಡಿಕೊಂಡಿದ್ದಾಳೆ. ಜುಲೈ 13ರಿಂದ ಅಂದರೆ ಎರಡು ವಾರದಲ್ಲಿ ಇಲ್ಲಿಯವರೆಗೆ ಇದು ಮೂರನೇ ಪ್ರಕರಣ. ಈಗ ಕಡಲೂರ್ ಜಿಲ್ಲೆಯ, ಶಕ್ತಿ ಮ್ಯಾಟ್ರಿಕ್ಯುಲೇಶನ್ ಮತ್ತು ಹೈಯರ್ ಸೆಕೆಂಡರಿ ಸ್ಕೂಲ್‌ನ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಗೇ, ನಾಲ್ಕು ಪುಟಗಳ ಸೂಸೈಟ್ ನೋಟ್ ಬರೆದಿಟ್ಟಿದ್ದಾಳೆ. ʼನಾನು ಒಬ್ಬ ಐಎಎಸ್ ಅಧಿಕಾರಿಯಾಗಬೇಕು ಎಂಬುದು ನನ್ನ ಅಪ್ಪ-ಅಮ್ಮನ ಆಸೆ. ಆದರೆ ನನಗೆ ಅದನ್ನು ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಸಾಯುತ್ತಿದ್ದೇನೆʼ ಹೇಳಿದ್ದಾಳೆ.
ಈ ಬಗ್ಗೆ ಮಾಹಿತಿ ನೀಡಿರುವ ಕಡಲೂರ್ ಜಿಲ್ಲಾ ಪೊಲೀಸ್ ಅಧಿಕಾರಿ ಶಕ್ತಿ ಗಣೇಶನ್, ʼಬಾಲಕಿಯ ಮೃತದೇಹವನ್ನು ಪೋಸ್ಟ್‌ಮಾರ್ಟಮ್‌ಗೆ ಕಳಿಸಿದ್ದೇವೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆʼ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಜುಲೈ 13ರಿಂದ 26ರವರೆಗೆ ಆತ್ಮಹತ್ಯೆ ಮಾಡಿಕೊಂಡ ಮೂವರೂ ವಿದ್ಯಾರ್ಥಿನಿಯರೂ 12ನೇ ತರಗತಿಯವರೇ ಆಗಿದ್ದಾರೆ. ಮೊದಲು ಕಲ್ಲಕುರಿಚಿ ಜಿಲ್ಲೆಯ ಖಾಸಗಿ ವಸತಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಈ ಸಾವು ತಮಿಳುನಾಡಿನಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ವಿದ್ಯಾರ್ಥಿನಿಯ ಸಾವಿನ ಹಿಂದೆ ಹಾಸ್ಟೆಲ್‌ನ ವಾರ್ಡನ್‌ಗಳು, ಕೆಲಸಗಾರರು, ಆಡಳಿತ ಮಂಡಳಿಯ ಕೈವಾಡವಿದೆ ಎಂದು ಹೆತ್ತವರು, ಪೋಷಕರು ಆರೋಪಿಸಿದ್ದಲ್ಲದೆ, ತೀವ್ರತರ ಪ್ರತಿಭಟನೆ ನಡೆಸಿದರು. ವಾಹನಗಳನ್ನೆಲ್ಲ ಸುಟ್ಟು ಹಾಕಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸಿಐಡಿಯ ಕ್ರೈಂ ಬ್ರ್ಯಾಂಚ್‌ನಿಂದ ತನಿಖೆಯೂ ನಡೆಯುತ್ತಿದೆ. ಈಗಾಗಲೇ ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರು ಸೇರಿ ಒಟ್ಟು ಐವರನ್ನು ಬಂಧಿಸಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಮತ್ತೊಬ್ಬ ಪಿಯು ವಿದ್ಯಾರ್ಥಿನಿ ನಿಗೂಢ ಸಾವು, ಆತ್ಮಹತ್ಯೆ ಶಂಕೆ
ಆ ಕಹಿ ನೆನಪು ಮಾಸುವ ಮುನ್ನವೇ ತಿರುವಳ್ಳೂರು ಜಿಲ್ಲೆಯ ಸೇಕ್ರೆಡ್ ಹಾರ್ಟ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ 12 ನೇ ತರಗತಿ ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿದ್ದು, ಇದೂ ಆತ್ಮಹತ್ಯೆಯೇ ಎಂದು ಹೇಳಲಾಗಿದೆ. ಹೀಗೆ ಸಾಲುಸಾಲು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆತಂಕ ವ್ಯಕ್ತಪಡಿಸಿದ್ದಾರೆ. ʼದಯವಿಟ್ಟು ಆತ್ಮಹತ್ಯೆ ಯೋಚನೆ ಮಾಡಬೇಡಿ. ನಿಮಗೆ ಆಗುತ್ತಿರುವ ಮಾನಸಿಕ-ದೈಹಿಕ ಸಮಸ್ಯೆಯನ್ನು ಹೇಳಿಕೊಳ್ಳಿ. ಲೈಂಗಿಕ ದೌರ್ಜನ್ಯ ಆಗುತ್ತಿದ್ದರೆ ಅದನ್ನೂ ತಿಳಿಸಿʼ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: School Girl Suicide | ಶಿಕ್ಷಕರ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಶಾಲೆ ಮೇಲೆ ಜನರ ದಾಳಿ, ಬಸ್‌ಗೆ ಬೆಂಕಿ