Site icon Vistara News

ತಮಿಳುನಾಡಲ್ಲಿ ಮುಂದುವರಿದ ವಿದ್ಯಾರ್ಥಿಗಳ ಸಾವಿನ ಸರಣಿ; 12ನೇ ತರಗತಿ ಹುಡುಗನ ಆತ್ಮಹತ್ಯೆ

Suicide

ಚೆನ್ನೈ: ತಮಿಳುನಾಡಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಕಳೆದ ನಾಲ್ಕು ಪ್ರಕರಣಗಳಲ್ಲಿ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಾರೈಕುಡಿ ಎಂಬಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Class 12 student dies) ಮಾಡಿಕೊಂಡಿದ್ದಾನೆ. ಇದರೊಂದಿಗೆ 2ವಾರದಲ್ಲಿ ಒಟ್ಟು ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.

ಎಂದಿನಂತೆ ಕಾಲೇಜಿನಿಂದ ಮನೆಗೆ ಬಂದ ಹುಡುಗ ನೇಣುಬಿಗಿದುಕೊಂಡಿದ್ದಾನೆ. ಈ ವೇಳೆ ಈತನ ಅಪ್ಪ-ಅಮ್ಮ ತಿರುಚಂದೂರ್ ಎಂಬಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಹುಡುಗ ಕಾಲೇಜಿನಿಂದ ಬಂದು ಮನೆಯೊಳಗೆ ಹೊಕ್ಕವನು ರಾತ್ರಿಯಾದರೂ ಒಮ್ಮೆಯೂ ಬಾಗಿಲು ತೆಗೆಯದೆ ಇದ್ದಾಗ ಅನುಮಾನ ಬಂದ ಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಮತ್ತು ಆತನ ಪಾಲಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಪಾಲಕರು ಬಾಗಿಲು ತೆಗೆದು ಒಳಗೆ ಹೋದಾಗ ಹುಡುಗನ ಮೃತದೇಹ ಸಿಕ್ಕಿದೆ. ಅವನ ಶವವನ್ನು ಪೋಸ್ಟ್​ ಮಾರ್ಟಮ್​​ಗೆ ಕಳಿಸಿದ್ದು, ಇನ್ನೂ ವರದಿ ಬಂದಿಲ್ಲ. ಹುಡುಗನ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.

ಸಾಲುಸಾಲು ಸಾವು
ಜುಲೈ 13ರಂದು ತಮಿಳುನಾಡಿನ ಕಲ್ಲಕುರಿಚಿಯ ಖಾಸಗಿ ವಸತಿ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಸಾವಿನ ಪರಿಣಾಮ ತಮಿಳುನಾಡಿನಲ್ಲಿ ದೊಡ್ಡಮಟ್ಟದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಈಕೆಯ ಸಾವಿಗೆ ಶಾಲೆಯ ಶಿಕ್ಷಕ ವೃಂದ, ಹಾಸ್ಟೆಲ್​ ವಾರ್ಡನ್​ ಕಾರಣ ಎಂದು ಪಾಲಕರು-ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಕೇಸ್​​​ನ ತನಿಖೆ​​ ಸಿಐಡಿಯ ಕ್ರೈಂ ಬ್ರ್ಯಾಂಚ್​​ನಿಂದ ನಡೆಯುತ್ತಿದೆ.

ಹಾಗೇ, ಜುಲೈ 25ರಂದು ತಿರುವಲ್ಲೂರ್​​ ಮತ್ತು ಕಡಲೂರ್​ ಜಿಲ್ಲೆಗಳಲ್ಲಿ 12 ನೇ ತರಗತಿ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿದೆ. ಕಡಲೂರ್​ನಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಡೆತ್ ನೋಟ್​ ಬರೆದಿಟ್ಟಿದ್ದು, ‘ನನ್ನ ತಂದೆ ತಾಯಿ ನಾನು ಐಎಎಸ್​ ಅಧಿಕಾರಿಯಾಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ನನಗೆ ಅವರ ಆಸೆ ನೆರವೇರಿಸಲು ಸಾಧ್ಯವಾಗದ ಕಾರಣ ಸಾಯುತ್ತಿದ್ದೇನೆ’ ಎಂದು ಹೇಳಿದ್ದಾಳೆ. ಇನ್ನು ಜುಲೈ 26ರಂದು ಶಿವಕಾಶಿಯ ಅಯ್ಯಂಬಟ್ಟಿಯಲ್ಲಿ 11ನೇ ತರಗತಿ ವಿದ್ಯಾರ್ಥಿನಿ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಹೀಗೆ ಸಾಲುಸಾಲು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಆತಂಕ ವ್ಯಕ್ತಪಡಿಸಿದ್ದಾರೆ. ʼದಯವಿಟ್ಟು ಆತ್ಮಹತ್ಯೆ ಯೋಚನೆ ಮಾಡಬೇಡಿ. ನಿಮಗೆ ಆಗುತ್ತಿರುವ ಮಾನಸಿಕ-ದೈಹಿಕ ಸಮಸ್ಯೆಯನ್ನು ಹೇಳಿಕೊಳ್ಳಿ. ಲೈಂಗಿಕ ದೌರ್ಜನ್ಯ ಆಗುತ್ತಿದ್ದರೆ ಅದನ್ನೂ ತಿಳಿಸಿʼ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಲ್ಲಿ ಇನ್ನೊಬ್ಬಳು 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; 2 ವಾರದಲ್ಲಿ 3ನೇ ಕೇಸ್‌

Exit mobile version