ಆನೇಕಲ್: ಪತ್ನಿ ತವರು ಮನೆ ಸೇರಿ ಡಿವೋರ್ಸ್ ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದ ಪತಿಯೊಬ್ಬ ಪತ್ನಿಯ ತಮ್ಮನ ಕುತ್ತಿಗೆಗೆ ಚಾಕು ಇರಿದು (Attempt to murder) ಪರಾರಿ ಆಗಿರುವ ಘಟನೆ ಆನೇಕಲ್ ತಾಲೂಕಿನ ಸಿಡಿಹೊಸಕೋಟೆಯಲ್ಲಿ ನಡೆದಿದೆ. ಪುನೀತ್ ರಾಜ್ ಹಲ್ಲೆಗೊಳಗಾದವರು.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಮಣಿಕಂಠ ಎಂಬಾತ ಪುನೀತ್ ರಾಜ್‌ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಆಂಧ್ರಪ್ರದೇಶದ ಪನ್ನೂರಿನ ನಿವಾಸಿಯಾದ ಮಣಿಕಂಠ ಕಳೆದ ಫೆಬ್ರವರಿ ತಿಂಗಳಲ್ಲಿ ಪುನೀತ್ ರಾಜ್‌ನ ಅಕ್ಕ ಶ್ವೇತಾಳೊಂದಿಗೆ ಮದುವೆ ಮಾಡಿಕೊಡಲಾಗಿತ್ತು.
ಆದರೆ ಮದುವೆಯಾದ 20 ದಿನಕ್ಕೆ ಶ್ವೇತ ತವರು ಮನೆ ಸೇರಿದ್ದಳು. ಪತಿ ವರ್ತನೆ ಸರಿ ಇಲ್ಲ ಎಂದು ಮಣಿಕಂಠ ಹಾಗೂ ಅವರ ಕುಟುಂಬದವರ ಮೇಲೆ ಪೊಲೀಸರಿಗೆ ದೂರು ಕೊಡಲಾಗಿತ್ತು. ಈ ನಡುವೆ ಶ್ವೇತಾ ಮಣಿಕಂಠನಿಗೆ ಡಿವೋರ್ಸ್ ನೋಟಿಸ್ ಸಹ ಕಳುಹಿಸಿದ್ದಳು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮಣಿಕಂಠ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಸಿಡಿಹೊಸಕೋಟೆಯಲ್ಲಿರುವ ಪತ್ನಿ ಶ್ವೇತಾ ಮನೆಗೆ ನುಗ್ಗಿದ್ದ.
ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಮನೆಗೆ ನುಗ್ಗಿದಾಗ ಎದುರಿಗೆ ಸಿಕ್ಕ ಪತ್ನಿ ಶ್ವೇತಾಳ ತಮ್ಮ ಪುನೀತ್‌ನಿಗೆ ಚಾಕುವಿನಿಂದ ಕತ್ತು ಸೀಳಿದ್ದಾನೆ. ಮನೆಯವರೆಲ್ಲ ಚೀರಾಡುತ್ತಿದ್ದಂತೆ ಅಲ್ಲಿಂದ ಪರಾರಿ ಆಗಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಪುನೀತ್‌ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು
ಮಚ್ಚಿನಿಂದ ಕೊಚ್ಚಿ ಚೋಳಶೆಟ್ಟಿಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಪತಿಯ ಹತ್ಯೆ!
ಚಿಕ್ಕಬಳ್ಳಾಪುರ: ಚೋಳಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಂಗರತ್ಮಮ್ಮರ ಪತಿಯ ಬರ್ಬರ ಹತ್ಯೆ ಆಗಿದೆ. ಚಿಕ್ಕಬಳ್ಳಾಪುರ ಗೌರಿಬಿದನೂರು ತಾಲ್ಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ರಾಮಕೃಷ್ಣಪ್ಪ ಹತ್ಯೆಯಾದವರು.
ರಾಮಕೃಷ್ಣಪ್ಪ ಡೈರಿಗೆ ಹಾಲು ಹಾಕಲು ಬಂದಾಗ ಅವರ ಚಿಕ್ಕಪ್ಪನ ಮಗ ಚೋಳಹಳ್ಳಿ ನಾಗರಾಜ್ ಎಂಬಾತ ಮಚ್ಚು ಬೀಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವೈಯಕ್ತಿಕ ದ್ವೇಷದಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಚೋಳಶೆಟ್ಟಿಹಳ್ಳಿ ಗ್ರಾಮಕ್ಕೆ ಎಸ್‌ಪಿ ಡಿ.ಎಲ್. ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳದಿಂದ ಆರೋಪಿ ನಾಗರಾಜ್ ಪರಾರಿ ಆಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಅನೈತಿಕ ಸಂಬಂಧದ ಶಂಕೆ
ಇದು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಹೇಳಲಾಗಿದೆ. ಸಂಬಂಧದ ಒಳಗೆ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದನ್ನು ಚಿಕ್ಕಪ್ಪನ ಮಗ ಆಕ್ಷೇಪಿಸಿದ್ದ. ಆದರೆ, ರಾಮಕೃಷ್ಣ ಇದಕ್ಕೆ ಸೊಪ್ಪು ಹಾಕಿರಲಿಲ್ಲ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.