ಬೆಂಗಳೂರು: ದೇಶದ ಗಡಿ ಕಾಯುವ ಭದ್ರತಾ ಪಡೆಯ ಯೋಧರೊಬ್ಬರು ಸೈಬರ್ ವಂಚಕರ ದಾಳಿಗೆ ತುತ್ತಾಗಿ ₹1,30,000 ಹಣ ಕಳೆದುಕೊಂಡಿದ್ದಾರೆ. ಗಡಿ ಭದ್ರತಾ ಪಡೆ (BSF) ಕಾರ್ಯನಿರ್ವಹಿಸುತ್ತಿರುವ ಯೋಧ ಬ್ರಿಜೇಶ್ ಕುಮಾರ್ ತಮ್ಮ ಮನೆಯನ್ನು ಬದಲಾಯಿಸುವ ಸಮಯದಲ್ಲಿ ಪ್ಯಾಕರ್ಸ್ & ಮೂವರ್ಸ್ ನಂಬರನ್ನು ಗೂಗಲ್‌ನಿಂದ ಪಡೆದಿದ್ದರು. ಈ ನಂಬರ್‌ನವರೊಂದಿಗೆ ವ್ಯವಹಾರ ನಡೆಸಿ, ಸೇವೆ ಪಡೆಯಲು ಮುಂದಾದಾಗ ಈ ವಂಚನೆ ನಡೆದಿದೆ.
ನಡೆದಿದ್ದೇನು? : ಬೆಂಗಳೂರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ BSF ಯೋಧ ಬ್ರಿಜೇಶ್ ಕುಮಾರ್ ಅವರಿಗೆ ಮಧ್ಯಪ್ರದೇಶಕ್ಕೆ ವರ್ಗಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯ ಸಾಮಾನುಗಳನ್ನು ಸಾಗಿಸಲು ಪ್ಯಾಕರ್ಸ್ & ಮೂವರ್ಸ್ ಅವರನ್ನು ಹುಡುಕುತ್ತಿದ್ದರು. ಗೂಗಲ್‌ನಲ್ಲಿ ಸಿಕ್ಕ ಒಂದು ನಂಬರ್‌ಗೆ ಕರೆ ಮಾಡಿ ಪ್ಯಾಕರ್ಸ್ & ಮೂವರ್ಸ್ ಒಬ್ಬರನ್ನು ಬುಕ್ ಮಾಡಿದ್ದರು.
ಆ ಸಂದರ್ಭದಲ್ಲಿ ಸೈಬರ್ ಆಗಂತಕರು ಸೇವೆಯನ್ನು ನೀಡಲು ಮುಂಗಡ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಇದಕ್ಕೆ ಯೋಧ ಬ್ರಿಜೇಶ್ ಒಪ್ಪಿಕೊಂಡಿದ್ದು, ಆನ್ ಲೈನ್‌ನಲ್ಲಿ ಹಣ ಪಾವತಿಸಲು ಸಮ್ಮತಿ ಸೂಚಿಸಿದ್ದರು. ವಂಚಕರು ಅವರಿಗೆ ಲಿಂಕ್ ಕಳುಹಿಸಿದರು. ಬ್ರಿಜೇಶ್ ಕುಮಾರ್ ತಮ್ಮ ಪತ್ನಿಯ ಖಾತೆಯಿಂದ ₹1,000 ಜಮಾ ಮಾಡಿದಾಗ ಇದ್ದಕ್ಕಿದಂತೆಯೇ ₹19,000 ಕಡಿತಗೊಂಡಿದೆ. ಈ ಬಗ್ಗೆ ಮಾಹಿತಿ ಪಡೆಯಲು ಬ್ರಿಜೇಶ್ ಪ್ಯಾಕರ್ಸ್ & ಮೂವರ್ಸ್ ಹೆಸರಿನಲ್ಲಿದ್ದ ಅದೇ ನಂಬರ್‌ಗೆ ಕರೆ ಮಾಡಿದಾಗ ಅದನ್ನು ಸರಿ ಮಾಡುವುದಾಗಿ ತಿಳಿಸಿ ಮತ್ತೊಂದು ಲಿಂಕ್ ಕಳುಹಿಸಿದರು.
ಆಗ ಮತೊಮ್ಮೆ ₹63,000 ಹಣವನ್ನು ದೋಚಲಾಗಿದೆ. ನಂತರ ಮತ್ತೊಂದು ಲಿಂಕ್ ಕಳುಹಿಸಿ ₹43,000 ಹಣವನ್ನು ಪಡೆದುಕೊಳ್ಳಲಾಗಿದೆ. ಹೀಗೆ ಹಂತಹಂತವಾಗಿ ಒಟ್ಟು ₹1,30,000 ಹಣವನ್ನು ವಂಚಕರು ಪಡೆದುಕೊಂಡಿದ್ದಾರೆ. ಈ ಬಗ್ಗೆ ಬ್ರಿಜೇಶ್ ಕುಮಾರ್ ನಾರ್ಥ್ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೈಬರ್ ವಂಚಕರು ಹೊಸ ಹೊಸ ಐಡಿಯಾಗಳನ್ನು ಮಾಡಿ ವಂಚಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುವವರು ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಪೊಲೀಸರು ಕೋರಿದ್ದಾರೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಭಾರೀ ರಿಯಾಯಿತಿ ಆಸೆಗೆ ಬಿದ್ದು ₹3 ಲಕ್ಷ ಕಳೆದುಕೊಂಡ ಮಹಿಳೆ