ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ್ನಲ್ಲಿ ಬಿಜೆಪಿ ನಾಯಕ (BJP Leader)ನೊಬ್ಬನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಮರವೊಂದಕ್ಕೆ ಅವರ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೇ, ಮೃತಪಟ್ಟ ಬಿಜೆಪಿ ನಾಯಕ ಸೋಮ್ ರಾಜ್ ಎಂಬುವರಾಗಿದ್ದು, ಇಂದು ಮುಂಜಾನೆ ಅವರ ಮೃತದೇಹವನ್ನು ದಾರಿಹೋಕರೊಬ್ಬರು ನೋಡಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಮ್ ರಾಜ್ ದೇಹದ ಮೇಲೆ ರಕ್ತವಿದೆ. ಸದ್ಯ ಅವರ ಶವವನ್ನು ಪೋಸ್ಟ್ ಮಾರ್ಟಮ್ ಮಾಡಿ, ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮ್ ರಾಜ್ ಕಳೆದ ಮೂರ್ನಾಲ್ಕು ದಿನಗಳಿಂದಲೂ ನಾಪತ್ತೆಯಾಗಿದ್ದರು. ಅವರಿಂದು ಮೃತಪಟ್ಟಿದ್ದಾರೆ. ಸೋಮ್ ರಾಜ್ರನ್ನು ಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಇದೊಂದು ಕೊಲೆ ಕೇಸ್ ಆಗಿದ್ದು ತನಿಖೆ ಮಾಡಬೇಕು ಎಂದು ಹಲವು ಬಿಜೆಪಿ ನಾಯಕರೂ ಆಗ್ರಹ ಮಾಡುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕಥುವಾ ಎಸ್ಎಸ್ಪಿ ಆರ್.ಸಿ. ಕೋಟ್ವಾಲ್, ಬಿಜೆಪಿ ನಾಯಕನ ಸಾವಿನ ಕೇಸ್ ತನಿಖೆಗಾಗಿ ಎಸ್ಐಟಿ (ವಿಶೇಷ ತನಿಖಾ ತಂಡ) ರಚನೆ ಮಾಡಲಾಗಿದೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಇನ್ನೂ ಬರಬೇಕಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ನಾಯಕನ ಸಾವಿಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಂತಾಪ ಸೂಚಿಸಿದ್ದಾರೆ. ಸೋಮಾ ನನ್ನ ಹಳೇ ಸಹೋದ್ಯೋಗಿ ಆಗಿದ್ದರು. ಅವರೊಂದಿಗೆ ನನ್ನ ಒಡನಾಟ ತುಂಬ ಚೆನ್ನಾಗಿತ್ತು ಎಂದೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಹಂತಕ ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರನ್ನು ವಜಾಗೊಳಿಸಿದ ಜಮ್ಮು ಕಾಶ್ಮೀರ ಸರ್ಕಾರ