ಶಿರಸಿ: ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ (Attack on police) ಸಂಬಂಧಿಸಿದಂತೆ ಮಾಜಿ ಶಾಸಕರೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾಜಿ ಶಾಸಕ ವಿ.ಎಸ್. ಪಾಟೀಲ್ (VS Patil) ಪುತ್ರ ಬಾಪು ಗೌಡ ಪಾಟೀಲ್ (Bapu Gowda Patil) ಎಂಬಾತನನ್ನು ಮುಂಡಗೋಡ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜತೆ ಸೇರಿ ಎಎಸ್‌ಐ ಬಾಲಕೃಷ್ಣ ಪಾಲೇಕರ್ ಎಂಬುವವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪವನ್ನು ಬಾಪುಗೌಡ ಪಾಟೀಲ್ ಎದುರಿಸುತ್ತಿದ್ದಾನೆ. ಅಲ್ಲದೆ ಎರಡು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ. ಇದೀಗ ಶಿರಸಿ ಸಬ್ ಜೈಲಿನಲ್ಲಿರುವ ಮಾಜಿ ಶಾಸಕ ವಿ.ಎಸ್. ಪಾಟೀಲ್ ಪುತ್ರ ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141,143, 147, 323, 353, 504, 506,149ನಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದ್ದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರೊಂದಿಗೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲೂ ಬಾಪು ಗೌಡ ಪಾಟೀಲ್ ಆರೋಪಿಯಾಗಿದ್ದ. ಕಳೆದ 6 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಬಾಪು ಗೌಡ ಪಾಟೀಲ್‌ನನ್ನು ಶನಿವಾರ ತಡರಾತ್ರಿ ಬೆಂಗಳೂರಿನಲ್ಲಿ ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಪು ಗೌಡ ಪಾಟೀಲ್‌ಗೆ ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ: Lok Sabha Election 2024: ಮಂಡ್ಯ ಟಿಕೆಟ್ ಕಿರಿಕ್; ನಮಗೇ ಬೇಕು ಎಂದ ಬಿಜೆಪಿ! ಸುಮಲತಾ ಕಥೆ ಏನು?
ಸರಳ, ಸಜ್ಜನ ರಾಜಕಾರಣಿಯಾಗಿ ಕ್ಷೇತ್ರದಾದ್ಯಂತ ಹೆಸರು ಗಳಿಸಿರುವ ಮಾಜಿ ಶಾಸಕ ವಿ.ಎಸ್. ಪಾಟೀಲ್, ಈ ಮೊದಲೇ ಮಗನ ನಡವಳಿಕೆಯ ಕುರಿತು ಸಾರ್ವಜನಿಕವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೂ ಸಹ ತಮ್ಮ ಮಗನ ಈ ರೀತಿ ಕೆಲಸಗಳಿಂದಾಗಿ ಜನರೆದುರು ಮುಜುಗರ ಎದುರಿಸುವಂತಾಗಿದೆ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.