ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ, ಟೆರೇಸ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ. ಆಕೆ ಶಾಲೆಯ ಟೆರೇಸ್ ಮೇಲಿಂದ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಈಕೆಯ ಸಾವು ನಿಗೂಢವೆನ್ನಿಸಿದೆ. ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸನ್ಬೀಮ್ ಎಂಬ ಶಾಲೆಯಲ್ಲಿ. ಮೇ 26ರ ಮುಂಜಾನೆ 8.45ರ ಹೊತ್ತಿಗೆ.
ಬಾಲಕಿಯ ಸಾವು ಈಗ ವಿವಾದಕ್ಕೂ ಕಾರಣವಾಗಿದೆ. ಶಾಲೆಗೆ ಬೇಸಿಗೆ ರಜಾ ಇದ್ದರೂ ನನ್ನ ಮಗಳನ್ನು ಶಾಲೆಗೆ ಕರೆಸಲಾಗಿತ್ತು ಎಂದು ಪಾಲಕರು ಆರೋಪಿಸಿದ್ದಾರೆ. ಶುಕ್ರವಾರ ಮುಂಜಾನೆಯೇ ಮಗಳು ಶಾಲೆಗೆ ಹೋಗಿದ್ದಳು. ಆದರೆ ಬೆಳಗ್ಗೆ 10 ಗಂಟೆ ಹೊತ್ತಿಗೆ ನಮಗೆ ಶಾಲೆಯಿಂದ ಕರೆಬಂತು. ನಿಮ್ಮ ಮಗಳು ಉಯ್ಯಾಲೆಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಅವರು ನಮಗೆ ಹೇಳಿದರು. ಹಾಗೇ, ಆಸ್ಪತ್ರೆಗೆ ದಾಖಲಿಸಿದ್ದಾಗಿಯೂ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಇಷ್ಟೆಲ್ಲ ಆದ ಮೇಲೆ ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಬಾಲಕಿಯ ಪಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: Cooker Blast: ರಾಮನಗರದಲ್ಲಿ ಎಲೆಕ್ಷನ್ ಪ್ರಚಾರದ ವೇಳೆ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಬಾಲಕಿ ಟೆರೇಸ್ನಿಂದ ಬಿದ್ದಿದ್ದು ಸಿಸಿಟಿವಿಯಲ್ಲಿ ಕಾಣಿಸುತ್ತದೆ. ಇದರಲ್ಲೇನೋ ಸಂಚು ಇದೆ. ಈ ಸಾವು ನಿಗೂಢವಾಗಿದೆ. ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ. ಹುಡುಗಿಯ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಶಾಲೆಯಲ್ಲಿ ಉಯ್ಯಾಲೆ ಇರುವುದು ನೆಲದಿಂದ ಒಂದು-ಒಂದೂವರೆ ಅಡಿ ಎತ್ತರದಲ್ಲಿ. ಆಕೆ ಅಲ್ಲಿಂದ ಬಿದ್ದರೆ ಸಾಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ಸಾವಿನಲ್ಲಿ ಶಾಲೆಯ ಶಿಕ್ಷಕ ಅಭಿಷೇಕ್ ಕನೋಜಿಯಾ ಮತ್ತು ಆಡಳಿತ ವಿಭಾಗದ ಅಧಿಕಾರಿ ಬ್ರಿಜೇಶ್ ಯಾದವ್ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಶಾಲೆಯ ಪ್ರಾಂಶುಪಾಲರು ಈ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.