Site icon Vistara News

ಉತ್ತರ ಪ್ರದೇಶದಲ್ಲಿ ಶಿಕ್ಷಕನ ಬೆನ್ನಟ್ಟಿ ಹೋಗಿ ಮೂರು ಬಾರಿ ಗುಂಡು ಹಾರಿಸಿದ 10ನೇ ಕ್ಲಾಸ್​ ವಿದ್ಯಾರ್ಥಿ

Class 10 Student Shoots Teacher In Uttar Pradesh

ಲಖನೌ: 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಶಿಕ್ಷಕನಿಗೆ ತೀವ್ರ ಗಾಯಗಳಾಗಿದ್ದರೂ, ಜೀವಕ್ಕೇನೂ ಅಪಾಯ ಇಲ್ಲ ಎನ್ನಲಾಗಿದೆ. ಈ ಹುಡುಗ ಮತ್ತು ಇನ್ನೊಬ್ಬ ವಿದ್ಯಾರ್ಥಿ ನಡುವೆ ಶಾಲೆಯಲ್ಲಿ ಗಲಾಟೆಯಾಗಿತ್ತು. ಆಗ ಶಿಕ್ಷಕ ಇನ್ನೊಬ್ಬ ಹುಡುಗನ ಪರ ವಹಿಸಿ, ಈತನನ್ನು ನಿಂದಿಸಿದ್ದರು. ಅದೇ ಸಿಟ್ಟಿಗೆ ಹುಡುಗ ಶೂಟ್​ ಮಾಡಿದ್ದಾನೆ ಎಂದು ಹೇಳಲಾಗಿದೆ.

10ನೇ ತರಗತಿ ಹುಡುಗ ಪಿಸ್ತೂಲ್​​ ಹಿಡಿದು, ಶಿಕ್ಷಕನನ್ನು ಬೆನ್ನತ್ತಿ ಹೋಗಿ ಗುಂಡು ಹಾರಿಸಿದ್ದಾನೆ. ಆ ಜಾಗದಲ್ಲಿ ಇಬ್ಬರು-ಮೂವರು ಇದ್ದರೂ ಅವರಿಗೆ ಬಳಿ ಬರಲು ಭಯವಾಗಿ ದೂರದಲ್ಲೇ ಇದ್ದರು. ಒಬ್ಬಳಂತೂ ಅಲ್ಲಿನ ದೃಶ್ಯ ನೋಡಿಯೇ ಓಡಿ ಹೋಗಿದ್ದಾಳೆ. ಕೊನೆಯಲ್ಲಿ ಆ ಹುಡುಗನನ್ನು ಗಟ್ಟಿಯಾಗಿ ಹಿಡಿದು, ಶಿಕ್ಷಕನನ್ನು ಬಿಡಿಸಲಾಗಿದೆ. ಈ ದೃಶ್ಯಗಳೆಲ್ಲ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಪ್ರಾರಂಭ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಪೊಲೀಸ್ ಅಧಿಕಾರಿ ರಾಜೀವ್ ದೀಕ್ಷಿತ್, ‘ಹುಡುಗ ಮೂರು ಬಾರಿ ಗುಂಡು ಹಾರಿಸಿದರೂ, ಅದೃಷ್ಟಕ್ಕೆ ಶಿಕ್ಷಕನ ಸೂಕ್ಷ್ಮ ಅಂಗಗಳಿಗೆ ತಾಗಲಿಲ್ಲ. ಹೀಗಾಗಿ ಜೀವಕ್ಕೇನೂ ಅಪಾಯ ಇಲ್ಲದಂತಾಗಿದೆ. ಆದರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದೆ, ಲಖನೌ ಹಾಸ್ಪಿಟಲ್​ಗೆ ಕರೆದೊಯ್ಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಕ ‘ನಾನು ವಿದ್ಯಾರ್ಥಿಗೆ ಬೈದಿದ್ದರಿಂದ ಆತ ಇಷ್ಟೆಲ್ಲ ಸಿಟ್ಟಾಗಿದ್ದಾನೆ ಎಂದುಕೊಂಡಿರಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ವಲಸೆ ಕಾರ್ಮಿಕನನ್ನು ಕೊಂದ ಉಗ್ರರು; ಮಧ್ಯರಾತ್ರಿ ಗುಂಡಿನ ದಾಳಿ

Exit mobile version