ವೆಲ್ಲೂರು: ಸ್ವಂತ ಮಗಳನ್ನೇ ಗರ್ಭಿಣಿ ಮಾಡಿದ 44ವರ್ಷದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಅಪ್ಪನಿಂದಲೇ ಗರ್ಭ ಧರಿಸಿ, ಈಗ ಮಗುವಿಗೆ ಜನ್ಮ ಕೊಟ್ಟಿರುವ ಹುಡುಗಿಗೆ ಇನ್ನೂ 13 ವರ್ಷ. ತಮಿಳುನಾಡಿನ ವೆಲ್ಲೂರಿನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಈ ಹುಡುಗಿಗೆ ವಿಪರೀತ ಹೊಟ್ಟೆನೋವು ಬರುತ್ತಿತ್ತು. ಹೀಗಾಗಿ ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ತಪಾಸಣೆ ಮಾಡಿದಾಗ ವೈದ್ಯರೇ ಸ್ವತಃ ಕಂಗಾಲಾಗಿದ್ದರು. ಬಾಲಕಿ ಗರ್ಭಿಣಿ ಎಂಬ ವಿಷಯವನ್ನು ಮನೆಯವರಿಗೆ ತಿಳಿಸಿದ್ದರು.
ಆಗಸ್ಟ್ 2ರಂದು ಈ ಬಾಲಕಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಯೇ ಖುದ್ದಾಗಿ ಈ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದೆ. ಬಳಿಕ ಸಮಿತಿ ವೆಲ್ಲೂರು ಮಹಿಳಾ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಬಾಲಕಿಯನ್ನು ವಿಚಾರಣೆ ಮಾಡಿದಾಗ ಆಕೆ, ತನ್ನ ಈ ಸ್ಥಿತಿಗೆ ತಂದೆಯೇ ಕಾರಣ ಎಂದಿದ್ದಾಳೆ. ಸುಮಾರು 10 ತಿಂಗಳು ನನ್ನಪ್ಪ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ, ದೌರ್ಜನ್ಯವೆಸಗಿದ ಎಂದು ಕಣ್ಣೀರು ಹಾಕಿದ್ದಾಳೆ.
ಅಪ್ಪ-ಅಮ್ಮ ಬೇರೆಯಾಗಿದ್ದಾರೆ
ಈ ಹುಡುಗಿಯದ್ದು ನಿಜಕ್ಕೂ ದುರಂತ ಕತೆ. ಅಪ್ಪನ ಹಸಿದ ಹೊಟ್ಟೆಗೆ ಊಟ ಕೊಡಲು ಹೋಗುತ್ತಿದ್ದವಳು, ಆತನ ಕಾಮ ತೃಷೆಗೆ ತುತ್ತಾಗಿದ್ದಾಳೆ. ಬಾಲಕಿಯ ಅಪ್ಪ-ಅಮ್ಮ ಒಟ್ಟಿಗಿಲ್ಲ. ಹೀಗಾಗಿ ಇವಳು ತನ್ನ ತಮ್ಮನೊಂದಿಗೆ ಅಜ್ಜ-ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು. ಈಕೆಯ ತಂದೆಗೆ ಅಜ್ಜಿಯ ಮನೆಯಿಂದಲೇ ಊಟ ಕೊಡಲಾಗುತ್ತಿತ್ತು ಮತ್ತು ಅದನ್ನು ಬಾಲಕಿಯೇ ತೆಗೆದುಕೊಂಡು ಹೋಗುತ್ತಿದ್ದಳು. ಆ ಸಮಯದಲ್ಲೇ ತನ್ನಪ್ಪನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ‘ಯಾರಿಗಾದರೂ ಹೇಳಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಪ್ಪ ಹೆದರಿಸಿದ್ದ’ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ. ಬಾಲಕಿ ನೀಡಿದ ದೂರಿನ ಅನ್ವಯ ಆಕೆಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಆತನೀಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್, ಬೆದರಿಕೆ ಆರೋಪ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ FIR