Site icon Vistara News

ಮಾಜಿ ವಿದ್ಯಾರ್ಥಿಯ ಕ್ರೌರ್ಯಕ್ಕೆ ಸುಟ್ಟು ಬೆಂದು ಹೋಗಿದ್ದ ಪ್ರಾಂಶುಪಾಲೆ ನಿಧನ; ಆರೋಪಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸ್​

College principal Who Set Fire by Former Studen dies In Indore

#image_title

ಇಂದೋರ್​: ಮಾಜಿ ವಿದ್ಯಾರ್ಥಿ ಹಚ್ಚಿದ ಬೆಂಕಿಯಿಂದ ಸುಟ್ಟು, ಬೆಂದು ಹೋಗಿದ್ದ ಮಧ್ಯಪ್ರದೇಶ ಇಂದೋರ್​ನ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ (54) ಕೊನೆಗೂ ಬದುಕುಳಿಯಲಿಲ್ಲ (Indore college principal dies). ನಾಲ್ಕೈದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿಮುಕ್ತಾ ಶರ್ಮಾ ಅವರು ಇಂದು ಮುಂಜಾನೆ 4ಗಂಟೆ ಹೊತ್ತಿಗೆ ನಿಧನರಾಗಿದ್ದಾರೆ ಎಂದು ಅವರ ಸಹೋದರ ಅರವಿಂದ್ ತಿವಾರಿ ತಿಳಿಸಿದ್ದಾರೆ. ಆರೋಪಿ ಮಾಜಿ ವಿದ್ಯಾರ್ಥಿ ಆಶುತೋಶ್​ ಶ್ರೀವಾತ್ಸವ್​ಗೆ ಕೂಡ ಶೇ.20ರಷ್ಟು ಸುಟ್ಟ ಗಾಯಗಳಾಗಿವೆ.

ಆಶುತೋಶ್​ ಶ್ರೀವಾತ್ಸವ್​ ಇದೇ ಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದ. ಆತ ಪರೀಕ್ಷೆ ಮುಗಿಸಿ ಕಾಲೇಜು ಬಿಟ್ಟು ಹೋದರೂ ಅಂಕಪಟ್ಟಿ ಇನ್ನೂ ಕೈ ಸೇರಿರಲಿಲ್ಲ ಎಂಬ ಕಾರಣಕ್ಕೇ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ‘ನಾನು ನನ್ನ ಏಳು ಮತ್ತು ಎಂಟನೇ ಸೆಮಿಸ್ಟರ್​ ಪರೀಕ್ಷೆಯನ್ನು ಮುಗಿಸಿ, 2022ರ ಜುಲೈನಲ್ಲಿಯೇ ರಿಸಲ್ಟ್​ ಕೂಡ ಬಂದಿದೆ. ನಾನು ಕಾಲೇಜು ಮುಗಿಸಿ ಹೋಗಿಯಾದ ಮೇಲೆ, ನನ್ನ ಅಂಕಪಟ್ಟಿ ಕೊಡುವಂತೆ ಹಲವು ಬಾರಿ ಕಾಲೇಜಿಗೆ ಮನವಿ ಮಾಡಿದೆ. ಆದರೆ ಅವರು ಕೊಡಲಿಲ್ಲ. ಇದೇ ಕಾರಣಕ್ಕೆ ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದೆ ಎಂದು ಅವನು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ಮನೆಗೆ ಹೋಗುತ್ತಿದ್ದ ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ; ಸಾಯಲು ಹೊರಟಿದ್ದವನನ್ನು ತಡೆದ ವಾಚ್​ಮೆನ್​

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂದೋರ್​ ಗ್ರಾಮಾಂತರದ ಪೊಲೀಸ್ ಅಧೀಕ್ಷಕ ಭಗವತ್​ ಸಿಂಗ್​ ವಿರ್ಡೆ ‘ಆರೋಪಿ ಆಶುತೋಶ್​ (24) ಏಳನೇ ಸೆಮಿಸ್ಟರ್​ನಲ್ಲಿ ಫೇಲ್ ಆಗಿದ್ದ. ಈತನ ವಿರುದ್ಧ ಈ ಹಿಂದೆಯೂ ಎರಡು-ಮೂರು ಬಾರಿ ದೂರು ದಾಖಲಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಹಾಗೇ, ಇಂದೋರ್ ಜಿಲ್ಲಾಧಿಕಾರಿ ಇಳಯರಾಜ ಟಿ. ಅವರ ಆದೇಶದ ಮೇರೆಗೆ ಆಶುತೋಶ್​ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್​ಎಸ್​ಎ)ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಆ ವ್ಯಕ್ತಿಯ ವಿರುದ್ಧ ಯಾವುದೇ ಆರೋಪ ಹೊರಿಸದೆಯೂ, ಒಂದು ವರ್ಷಗಳ ಕಾಲ ಜೈಲಿನಲ್ಲಿ ಇಡಬಹುದು. ಆತ ದೇಶದ ಭದ್ರತೆಗೆ ಮಾರಕ ಎಂದು ಪರಿಗಣಿಸಲ್ಪಟ್ಟಿರುತ್ತಾನೆ.

ಸೋಮವಾರ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಕಾಲೇಜು ಮುಗಿಸಿ, ಮನೆಯತ್ತ ತೆರಳುತ್ತಿದ್ದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ಆಶುತೋಶ್​, ಅವರ ಮೇಲೆ ಪೆಟ್ರೋಲ್​ ಹಾಕಿ ಬೆಂಕಿ ಹಚ್ಚಿದ್ದಾನೆ. ವಿಮುಕ್ತಾ ಅವರು ಕೂಡಲೇ ದೊಡ್ಡದಾಗಿ ಅರಚುತ್ತ ಕಾಲೇಜಿನ ಕಟ್ಟಡದೊಳಗೆ ಓಡಿದ್ದಾರೆ. ಅಲ್ಲಿದ್ದ ಅವರ ಸಹೋದ್ಯೋಗಿಗಳೆಲ್ಲ ಸೇರಿ ಬೆಂಕಿ ನಂದಿಸಿದ್ದಾರೆ. ಇನ್ನು ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ಆಶುತೋಶ್​ ತಾನು ಕಟ್ಟಡದಿಂದ ಕೆಳಗೆ ಬಿದ್ದು ಸಾಯುವ ಪ್ರಯತ್ನ ಮಾಡಿದ್ದ. ಆದರೆ ವಾಚ್​ಮೆನ್​ ಆತನನ್ನು ತಡೆದ. ಬಳಿಕ ಅವನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ವಿಮುಕ್ತಾ ಶರ್ಮಾ ಅವರ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು.

Exit mobile version