ದೆಹಲಿ: ಯುವತಿಯ ಅನುಮತಿ ಮೇರೆಗೇ ನಾನು ಅವಳೊಂದಿಗೆ ಇದ್ದೆ, ದೈಹಿಕ ಸಂಪರ್ಕ ಬೆಳೆಸಿದ್ದೆ. ಹೀಗಾಗಿ ನನಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದ ಆರೋಪಿಗೆ ದೆಹಲಿ ಹೈಕೋರ್ಟ್ ಆದೇಶ ನಿರಾಸೆ ಮೂಡಿಸಿದೆ.
‘ಸಂಬಂಧ ಬೆಳೆಸುವಾಗ ಆಕೆ ಅಪ್ರಾಪ್ತೆ ಎಂಬುದು ಸ್ಪಷ್ಟವಾಗಿದೆ. ಒಬ್ಬ ಅಪ್ರಾಪ್ತೆ ದೈಹಿಕ ಸಂಪರ್ಕಕ್ಕೆ ಅನುಮತಿ ನೀಡಿದರೆ, ಜತೆಗಿರಲು ಸಮ್ಮತಿಸಿದರೆ, ಅದನ್ನು ಸಮ್ಮತಿ ಎಂದು ಕೋರ್ಟ್ ಪರಿಗಣಿಸುವುದಿಲ್ಲ. ಕಾನೂನಿನ ಕಣ್ಣಲ್ಲಿ ಅದಕ್ಕೆ ಮಾನ್ಯತೆ ಇಲ್ಲ. ಜಾಮೀನು ಕೊಡಲು ಸಾಧ್ಯವೂ ಇಲ್ಲ’ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ‘ಅಷ್ಟೇ ಅಲ್ಲ, ಜಾಮೀನಿಗೆ ಅರ್ಜಿ ಸಲ್ಲಿಸಿದ ಆರೋಪಿ, ಆಕೆ ಅಪ್ರಾಪ್ತೆ ಅಲ್ಲ ಎಂಬುದನ್ನು ಸಾಬೀತುಪಡಿಸಲು ಅವಳ ಆಧಾರ್ಕಾರ್ಡ್ನಲ್ಲಿ ಹುಟ್ಟಿದ ದಿನ ಬದಲಾವಣೆ ಮಾಡಿದ್ದನ್ನೂ ಕೋರ್ಟ್ ಗಮನಿಸಿದ್ದು, ಅದೂ ಕೂಡ ಗಂಭೀರವಾದ ಅಪರಾಧ’ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಇದು 2019ರ ಪ್ರಕರಣ. ಆಗ ದೆಹಲಿಯಲ್ಲಿ 16ವರ್ಷದ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಳು. ತನ್ನ ಮಗಳು ನಾಪತ್ತೆಯಾಗಿದ್ದಾಗಿ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಪತ್ತೆ ಕಾರ್ಯ ನಡೆಸಿದಾಗ, ಉತ್ತರ ಪ್ರದೇಶದ ಸಂಫಾಲ್ನಲ್ಲಿ 23ವರ್ಷದ ಯುವಕನೊಬ್ಬನೊಂದಿಗೆ ಪತ್ತೆಯಾಗಿದ್ದಳು. ಆತನಿಗೆ ಅದಾಗಲೇ ಮದುವೆಯಾಗಿದ್ದರೂ, ಈ ಹುಡುಗಿಯನ್ನು ಕರೆದುಕೊಂಡು ಹೋಗಿದ್ದ. ಯುವತಿಯನ್ನು ವಾಪಸ್ ಕರೆದುಕೊಂಡು ಬಂದು ಹೇಳಿಕೆ ಪಡೆದಾಗ, ‘ಆತ ನನ್ನ ಲವ್ವರ್. ಅವನೊಂದಿಗೆ ಈ ಒಂದೂವರೆ ತಿಂಗಳು ಇದ್ದಿದ್ದು ನನ್ನ ಮನಸ್ಫೂರ್ತಿಯಾಗಿ. ಅವನೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ನನಗೂ ಒಪ್ಪಿಗೆ ಇತ್ತು’ ಎಂದು ಹೇಳಿದ್ದಳು. ಅವಳು ಅಪ್ರಾಪ್ತೆಯಾಗಿದ್ದರಿಂದ ಆಕೆಯ ಹೇಳಿಕೆಗಿಂತಲೂ, ಅವಳ ಪಾಲಕರು ನೀಡಿದ್ದ ದೂರನ್ನೇ ಪರಿಗಣಿಸಿ ಯುವಕನನ್ನು ಬಂಧಿಸಲಾಯಿತು.
2019ರಿಂದಲೂ ಜೈಲಿನಲ್ಲಿಯೇ ಇದ್ದ ಅವನು ನಂತರ ಜಾಮೀನಿಗೆ ಅರ್ಜಿ ಹಾಕಿದ್ದ. ಆ ಹುಡುಗಿ ಅವನೊಂದಿಗೆ ಇದ್ದಾಗಲೇ ಆತ ಆಕೆಯ ಆಧಾರ್ ಕಾರ್ಡ್ ಪಡೆದು, ಅದರಲ್ಲಿ ಅವಳ ಹುಟ್ಟಿದ ದಿನ ಬದಲಾವಣೆ ಮಾಡಿದ್ದ. ಇದೂ ಕೂಡ ವಿಚಾರಣೆ ವೇಳೆ ಸಾಬೀತಾಗಿತ್ತು. ಆಕೆಗೆ 18ವರ್ಷ ಎಂದು ತೋರಿಸಿದರೆ ತನಗೆ ಆಗುವ ಶಿಕ್ಷೆ ತಪ್ಪುತ್ತದೆ ಎಂಬುದು ಅವನ ಮುಂದಾಲೋಚನೆ ಆಗಿತ್ತು. ಆದರೆ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆದ ವೇಳೆ ಅವನ ಯಾವುದೇ ಐಡಿಯಾವೂ ಫಲಿಸಲಿಲ್ಲ. ಜಾಮೀನು ಕೂಡ ನಿರಾಕರಣೆಗೊಂಡಿದೆ.
ಇದನ್ನೂ ಓದಿ: Vivek Agnihotri | ದಿಲ್ಲಿ ಹೈಕೋರ್ಟ್‌ಗೆ ವಿವೇಕ್ ಅಗ್ನಿಹೋತ್ರಿ ಕ್ಷಮೆಯಾಚನೆ, ಖುದ್ದು ಹಾಜರಾಗಿ ಎಂದ ಜಡ್ಜ್!