ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶ ಡೆಪ್ಯೂಟಿ ಹೈಕಮಿಷನ್ ಕಚೇರಿಯ ಬಳಿ ಇಂದು ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬ ಸುಮಾರು 10 ಸುತ್ತು ಗುಂಡು ಹಾರಿಸಿದ್ದಾನೆ. ಬಳಿಕ ತನಗೇ ತಾನು ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ. ಕಾನ್‌ಸ್ಟೆಬಲ್ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮಹಿಳೆ ನಡೆಯಲು ಆಗದೆ ವೀಲ್ ಚೇರ್‌ನಲ್ಲಿ ಕುಳಿತು ಹೋಗುತ್ತಿದ್ದರು. ಗುಂಡು ತಗುಲುತ್ತಿದ್ದಂತೆ ಮುಗ್ಗರಿಸಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಚೋದುಪ್ ಲೆಪ್ಚಾ ಎಂದು ಗುರುತಿಸಲಾಗಿದ್ದು, ಸುಮಾರು ಒಂದು ತಾಸು ಅಲ್ಲಿಯೇ ಬಾಂಗ್ಲಾದೇಶ ಡೆಪ್ಯೂಟಿ ಕಮಿಷನ್ ಕಚೇರಿ ಇರುವ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ. ಅದೇನಾಯಿತೋ, ಒಮ್ಮೆಲೇ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಚೋದುಪ್ ಲೆಪ್ಚಾ, ಕೋಲ್ಕತ್ತ ಪೊಲೀಸ್ ಸಶಸ್ತ್ರ ಪಡೆಯ 5ನೇ ಬೆಟಾಲಿಯನ್‌ನವ. ಒಂದಷ್ಟು ದಿನ ರಜೆ ಪಡೆದು ಹೋಗಿದ್ದ ಆತ ಇಂದು ಮುಂಜಾನೆ ವಾಪಸ್ ಕರ್ತವ್ಯಕ್ಕೆ ಹಾಜರಾಗಿದ್ದ. ಖಿನ್ನತೆಯಿಂದ ಬಳಲುತ್ತಿದ್ದ ಎಂದೂ ಹೇಳಲಾಗಿದೆ.
ಕೋಲ್ಕತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದು, ಫೂಟೇಜ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಅಂದಹಾಗೇ, ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮೃತ ಗಾಯಕ ಕೆಕೆ ತುಟಿ, ತಲೆ ಬಳಿ ಗಾಯ; ಅಸಹಜ ಸಾವು ಕೇಸ್ ದಾಖಲಿಸಿದ ಕೋಲ್ಕತ್ತ ಪೊಲೀಸ್